ನವದೆಹಲಿ:ಲಯದ ಸಮಸ್ಯೆ ಮತ್ತು ಪ್ರತಿಭಾನ್ವಿತ ಆಟಗಾರರ ದಂಡೇ ಇರುವ ಕಾರಣ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಶಿಖರ್ ಧವನ್ ವಿಶ್ವಕಪ್‌ಗೆ ಮರಳುವ ಆಶಾಭಾವನೆಯಲ್ಲಿದ್ದಾರೆ. ಇದೇ ವೇಳೆ ತಮ್ಮ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಯುವ ಆಟಗಾರ ಶುಭಮನ್ ಗಿಲ್ ಆಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದ್ವಿಶತಕ ವೀರ ಶುಭ್ಮನ್ ಗಿಲ್ ತನ್ನ ಸ್ಫೋಟಕ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಕಸರತ್ತು ಮಾಡಬೇಕು. ಅದರಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ. ಒಂದು ವೇಳೆ ನಾನೇನಾದರೂ ಆಯ್ಕೆ ಸಮಿತಿಯಲ್ಲಿದ್ದರೆ ನನ್ನ ಬದಲಿಗೆ ಯುವ ಆಟಗಾರನ್ನೇ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಗಿಲ್ ಈ ಋತುವಿನಲ್ಲಿ ಕ್ರಿಕೆಟ್ನ ಮೂರು ಸ್ವರೂಪಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. 23 ವರ್ಷದ ಕ್ರಿಕೆಟಿಗ ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಫಾರ್ಮ್ ಉಳಿಸಿಕೊಳ್ಳದ ಕಾರಣ ತಂಡದಿಂದ ಹೊರಗುಳಿದಿದ್ದೇನೆ ಎಂದು ಹೇಳಿದ್ದಾರೆ.
ಯುವ ಕ್ರಿಕೆಟಿಗ ಶುಭಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ, ಟಿ20 ಸರಣಿಯಲ್ಲಿ ಶತಕ ಮತ್ತು ಅಹಮದಾಬಾದ್‌ನಲ್ಲಿ ಡ್ರಾಗೊಂಡ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸೇರಿದಂತೆ ಈ ವರ್ಷ ಎಲ್ಲಾ ಮೂರು ಮಾದರಿ ಕ್ರಿಕೆಟ್ನಲ್ಲಿ ಶತಕವನ್ನು ಬಾರಿಸಿದ್ದಾರೆ. ಇದು ಆಟಗಾರನ ನಿಜವಾದ ಸತ್ವವನ್ನು ತೋರಿಸುತ್ತದೆ. ಇಂತಹ ಆಟಗಾರ ಭಾರತ ಕ್ರಿಕೆಟ್ ತಂಡಕ್ಕೆ ಅಗತ್ಯವಿದೆ ಎಂದು ಧವನ್ ಅಭಿಪ್ರಾಯಪಟ್ಟಿದ್ದಾರೆ.