ಹೈದರಾಬಾದ್: ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಕಷ್ಟ. ಅಲ್ಲಿನ ಮೈದಾನಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಹೇಳಲಾಗದು ಎಂದು ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೇಳಿದ್ದಾರೆ.
ಹರಿಣಗಳ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಸಿದ್ಧತೆ ನಡೆಸುತ್ತಿದೆ. ವಿಶ್ವಕಪ್ ಫೈನಲ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೈದಾನಕ್ಕಿಳಿಯುತ್ತಿದ್ದಾರೆ. ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಈ ಪ್ರವಾಸದಲ್ಲಿ 500 ವಿಕೆಟ್ ಪಡೆಯುವ ಹೊಸ್ತಿಲಲ್ಲಿದ್ದಾರೆ. ಒಟ್ಟಾರೆ ಭಾರತಕ್ಕಿದು ಹಲವು ವಿಶೇಷತೆಗಳ ಸರಣಿ.
ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇಯಂದು ಆರಂಭವಾಗಲಿರುವ ಟೆಸ್ಟ್ ಸರಣಿಯ ಕುರಿತು ಕೂಡಾ ಆಟಗಾರರೊಂದಿಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಶ್ವಿನ್ ಅವರು ಕೆ.ಎಸ್.ಭರತ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಮಾತನಾಡಿಸಿದರು. ಶಾರ್ದೂಲ್, ಹರಿಣಗಳ ನಾಡಿನ ಪಿಚ್‌ಗಳ ಕುರಿತು ತಮ್ಮ ಅನುಭವ ವಿವರಿಸಿದರು.
ಪಿಚ್ ವರ್ತನೆ ತಿಳಿಯುವುದಿಲ್ಲ:"ನನ್ನ ಪ್ರಕಾರ, ದಕ್ಷಿಣ ಆಫ್ರಿಕಾವು ಟೆಸ್ಟ್ ಕ್ರಿಕೆಟ್ ಆಡಲು ಅತ್ಯಂತ ಕಷ್ಟಕರ ದೇಶಗಳಲ್ಲಿ ಒಂದು. ಪಿಚ್ನ ಪರಿಸ್ಥಿತಿಗಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಆಗುವಂಥ ದೇಶಗಳಲ್ಲೂ ಇದೂ ಒಂದು. ಪಿಚ್ ಕುರಿತು ನಾವು ಇದೇ ರೀತಿ ಇರಲಿದೆ ಎಂದು ನಿರ್ಧರಿಸುವುದು ಕಷ್ಟ. ಹೀಗಾಗಿ ನಾವು ಆಡುವ ದಿನ ಮೈದಾನವನ್ನು ತಿಳಿಯಲು ಸಾಧ್ಯ. ಪಿಚ್ಗಿಳಿದು ಆಡಲು ಆರಂಭಿಸಿದ ನಂತರ ವಿಕೆಟ್ ಹೀಗೆ ವರ್ತಿಸುತ್ತೆದೆ ಎಂದು ಹೇಳಬಹುದು. ಹೀಗಾಗಿ ನಮ್ಮೆಲ್ಲ ಸಾಮರ್ಥ್ಯವನ್ನು ಬಳಸಿ ಆಡಬೇಕಿದೆ" ಎಂದು ಶಾರ್ದೂಲ್ ಹೇಳಿದ್ದಾರೆ.