ಭಾರತ ಕ್ರಿಕೆಟ್ ತಂಡದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ ಆಟಗಾರರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಜನವರಿಯಲ್ಲಿ ಬ್ಯಾಟರ್ ಕೆ.ಎಲ್.ರಾಹುಲ್, ಸ್ಪಿನ್ನರ್ ಅಕ್ಷರ್ ಪಟೇಲ್ ವಿವಾಹ ಬಂಧನಕ್ಕೆ ಒಳಗಾಗಿದ್ದರೆ, ಈಗ ವೇಗಿ ಶಾರ್ದೂಲ್ ಠಾಕೂರ್ ಸರದಿ. ಫೆಬ್ರವರಿ 27 ರಂದು ಕ್ರಿಕೆಟಿಗನ ಮದುವೆ ನಿಶ್ಚಯವಾಗಿದೆ. ಅದಕ್ಕೂ ಮೊದಲು ನಡೆದ ಅರಿಶಿಣ ಶಾಸ್ತ್ರದಲ್ಲಿ ಶಾರ್ದೂಲ್ ಡ್ಯಾನ್ಸ್ ಮಾಡಿದ್ದು ಸಖತ್ ವೈರಲ್ ಆಗಿದೆ.
ಶಾರ್ದೂಲ್ ಠಾಕೂರ್ ಅವರು ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪರುಲ್ಕರ್ ಅವರ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ವಿವಾಹ ಕಾರ್ಯಕ್ರಮಗಳು ಕಳೆಕಟ್ಟಿವೆ. ಅರಿಶಿಣ ಶಾಸ್ತ್ರವೂ ಮುಗಿದಿದೆ. ಈ ಸಂಭ್ರಮದಲ್ಲಿ ಶಾರ್ದೂಲ್ ಕುಟುಂಬಸ್ಥರು, ಸ್ನೇಹಿತರೊಂದಿಗೆ "ಜಿಂಗಾತ್" ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದು, ಅಲ್ಲಿದ್ದವರನ್ನು ರಂಜಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೂ ಖುಷಿ ನೀಡಿದೆ.
ಕ್ರಿಕೆಟಿಗ ಶಾರ್ದೂಲ್ ಮತ್ತು ಮಿಥಾಲಿ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ. ಅಂತಿಮವಾಗಿ ಜೋಡಿ ಮದುವೆಯಾಗಲು ಸಿದ್ಧರಾಗಿದ್ದಾರೆ. 2021 ರ ನವೆಂಬರ್ನಲ್ಲಿ ಜೋಡಿ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಧವಳ್ ಕುಲಕರ್ಣಿ ಮತ್ತು ಅಭಿಷೇಕ್ ನಾಯರ್ ಕೂಡ ಇದ್ದರು.
ಕಳೆದ ಕೆಲವು ವರ್ಷಗಳಿಂದ ಶಾರ್ದೂಲ್ ಠಾಕೂರ್ ಎಲ್ಲಾ ಮೂರು ಮಾದರಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ವಿದೇಶ ಪ್ರವಾಸ ಕೈಗೊಂಡಾಗ ತಂಡದಲ್ಲಿರುವ ಶಾರ್ದೂಲ್, ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿಲ್ಲ. ಏಕದಿನ ಸರಣಿಗೆ ಶಾರ್ದೂಲ್ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ.