ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ ಪರಾಭವಗೊಂಡ ನಂತರ ವೇಗದ ಬೌಲರ್ ಮೊಹಮದ್ ಶಮಿ ವಿರುದ್ಧ 'ಆನ್ಲೈನ್ ದಾಳಿ' ಮಾಡಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಗುರಿಯಾಗಿರುವ ಭಾರತದ ಹಿರಿಯ ವೇಗಿ ಮೊಹಮ್ಮದ್ ಶಮಿಗೆ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್, ಆಟಗಾರರಿಗೆ ಗೌರವ ತೋರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
"ಒಬ್ಬ ಆಟಗಾರನು ತನ್ನ ದೇಶಕ್ಕಾಗಿ ಮತ್ತು ಅವನ ಜನರಿಗಾಗಿ ಅನುಭವಿಸಬೇಕಾದ ಒತ್ತಡ, ಹೋರಾಟಗಳು ಮತ್ತು ತ್ಯಾಗಗಳು ಅಳೆಯಲಾಗದು. @MdShami11 ಒಬ್ಬ ಸ್ಟಾರ್ ಮತ್ತು ವಾಸ್ತವವಾಗಿ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ದಯವಿಟ್ಟು ನಿಮ್ಮ ಸ್ಟಾರ್ ಆಟಗಾರರನ್ನು ಗೌರವಿಸಿ. ಈ ಆಟವು ಜನರನ್ನು ಒಟ್ಟುಗೂಡಿಸಬೇಕು ಅವರನ್ನು #Shami #PAKvIND ಎಂದು ವಿಭಜಿಸಬಾರದು" ಎಂದು ರಿಜ್ವಾನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಭಾನುವಾರ ನಡೆದ ಟಿ 20 ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಸೋಲಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
3.5 ಓವರ್‌ಗಳಲ್ಲಿ 43 ರನ್ ನೀಡಿದ್ದ ಮೊಹಮದ್ ಶಮಿ ವಿರುದ್ಧ ಜನಾಂಗೀಯ ನಿಂದನೆ ಕೂಡಾ ಮಾಡಲಾಗಿತ್ತು. ಇನ್ನೂ ಕೆಲವರು ಮೊಹಮದ್ ಶಮಿ ಪಾಕಿಸ್ತಾನಕ್ಕೆ ಸೇರಿದವನು ಎಂದು ಮೂದಲಿಸಿದ್ದರು.