ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಶುರುವಾಗುವ ಮೂರು ಪಂದ್ಯಗಳ ಟಿ20 ಸರಣಿಗೆ ವೇಗಿ ಮೊಹಮದ್ ಶಮಿ, ಬ್ಯಾಟರ್ ದೀಪಕ್ ಹೂಡಾ ಅಲಭ್ಯರಾಗಲಿದ್ದಾರೆ. ಆಸ್ಟ್ರೇಲಿಯಾ ಸರಣಿಗೂ ಮೊದಲು ಕೊರೊನಾಗೆ ತುತ್ತಾಗಿದ್ದ ಮೊಹಮದ್ ಶಮಿ ಇನ್ನೂ ಚೇತರಿಸಿಕೊಂಡಿಲ್ಲ. ದೀಪಕ್ ಹೂಡಾ ಆಸೀಸ್ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಬೆನ್ನು ನೋವಿಗೆ ತುತ್ತಾಗಿದ್ದು, ದಕ್ಷಿಣ ಆಫ್ರಿಕಾ ಸರಣಯಿಂದ ಹೊರಬೀಳುವ ಸಾಧ್ಯತೆ ಇದೆ.
ಕೊರೊನಾಗೆ ತುತ್ತಾಗಿರುವ ಮೊಹಮದ್ ಶಮಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ಅವರ ಪಾಲ್ಗೊಳ್ಳುವಿಕೆ ಬಗ್ಗೆ ವೈದ್ಯಕೀಯ ತಂಡ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಅವರ ಬದಲಿ ಆಟಗಾರನಾಗಿ ಆಯ್ಕೆಯಾದ ಉಮೇಶ್ ಯಾದವ್ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ದೀಪಕ್ ಹೂಡಾ ಬದಲಾಗಿ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಬೆನ್ನು ನೋವಿಗೆ ತುತ್ತಾಗಿರುವ ದೀಪಕ್ ಹೂಡಾಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವೈದ್ಯಕೀಯ ತಂಡದ ನೆರವು ಬೇಕಿದೆ ಎಂದು ತಿಳಿದುಬಂದಿದೆ. ಹೂಡಾ ತಂಡದೊಂದಿಗೆ ತಿರುವನಂತಪುರಕ್ಕೆ ಪ್ರಯಾಣಿಸಿಲ್ಲ. ಸರಣಿಗೆ ಮೀಸಲು ಆಟಗಾರನಾಗಿ ಆಯ್ಕೆಯಾದ ಶ್ರೇಯಸ್ ಅಯ್ಯರ್ ತಂಡ ಸೇರಬಹುದಾಗಿದೆ.