ಶಾರ್ಜಾ:ಅರಬ್ ನಾಡು ದುಬೈನಲ್ಲಿ 7ನೇ ಆವೃತ್ತಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಂಡಿದ್ದು, ಹೊಸ ಹೊಸ ದಾಖಲೆ ನಿರ್ಮಾಣಗೊಳ್ಳಲು ಆರಂಭಗೊಂಡಿವೆ. ಇದೀಗ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಹೊಸದೊಂದು ಸಾಧನೆ ನಿರ್ಮಿಸಿದ್ದಾರೆ.
ಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 2 ವಿಕೆಟ್ ಪಡೆದುಕೊಳ್ಳುವ ಮೂಲಕ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
2007ರಿಂದ 2021ರ ಅವಧಿಯಲ್ಲಿ ಒಟ್ಟು 29 ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್ 41 ವಿಕೆಟ್ ಕಬಳಿಸಿದ್ದು, ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ 2007ರಿಂದ 2016ರವರೆಗೆ ಒಟ್ಟು 34 ಪಂದ್ಯಗಳಿಂದ 39 ವಿಕೆಟ್ ಪಡೆದ ದಾಖಲೆ ಬರೆದಿದ್ದರು. ಇದೀಗ ಅವರ ಸಾಧನೆ ಅಳಿಸಿ ಹಾಕಿರುವ ಬಾಂಗ್ಲಾ ಆಲ್ರೌಂಡರ್ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಇದನ್ನೂ ಓದಿರಿ:ಮರುಕಳಿಸದ ಇತಿಹಾಸ: ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಮೊದಲ ಸೋಲು
ನಂತರದ ಸ್ಥಾನದಲ್ಲಿ ಶ್ರೀಲಂಕಾದ ಲಸಿತ ಮಾಲಿಂಗಾ ಇದ್ದು, 31 ಪಂದ್ಯಗಳಿಂದ 38 ವಿಕೆಟ್ ಪಡೆದುಕೊಂಡಿದ್ದಾರೆ. ಈ ಸಾಧನೆ ಹೊರತಾಗಿ ಕೂಡ ಬಾಂಗ್ಲಾ ತಾನು ಆಡಿರುವ ಸೂಪರ್-12 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದೆ.