ಹೈದರಾಬಾದ್:ಅನುಭವಿ ಆಲ್‌ರೌಂಡರ್ ಮತ್ತು ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ಎಡ ತೋರು ಬೆರಳಿಗೆ ಗಾಯವಾಗಿರುವ ಕಾರಣ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 2023ರಿಂದ ಹೊರಗುಳಿದಿದ್ದಾರೆ. ಸೋಮವಾರ, ನವೆಂಬರ್ 6, 2023 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶದ ಲೀಗ್ ಹಂತದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಶಕೀಬ್ ಗಾಯಗೊಂಡರು. ಶಕೀಬ್ ಚುರುಕಾದ 82 ಅನ್ನು ಬಾರಿಸುವ ಮೂಲಕ ಶ್ರೀಲಂಕಾ ವಿರುದ್ಧ ಮೂರು ವಿಕೆಟ್ಗಳ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ನವೆಂಬರ್ 11 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಆದ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಬಾಂಗ್ಲಾದೇಶದ ಜತೆ ಆಡಲಿದೆ. ಈ ಪಂದ್ಯಕ್ಕೆ ನಾಯಕ ಶಕೀಬ್ ಹೊರಗುಳಿಯಲಿದ್ದಾರೆ. ಶ್ರೀಲಂಕಾ ಪಂದ್ಯದ ನಂತರ ಎಕ್ಸ್ - ರೇಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದು ದೃಢವಾಗಿದೆ.
ನಂತರ ಬಾಂಗ್ಲಾದೇಶ ತಂಡದಲ್ಲಿ ಶಕೀಬ್ ಬದಲಿಗೆ ಅನಾಮುಲ್ ಹಕ್ ಬಿಜೋಯ್ ಅವರನ್ನು ನೇಮಿಸಲಾಗಿದೆ. ಅನಾಮುಲ್ ಬಾಂಗ್ಲಾದೇಶ ಪರ 45 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬದಲಿ ಆಯ್ಕೆಗೆ ವಿಶ್ವಕಪ್ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ.
ಬಾಂಗ್ಲಾದೇಶ ತಂಡದ ಫಿಸಿಯೋ ಬೇಜೆದುಲ್ ಇಸ್ಲಾಂ ಖಾನ್ ಗಾಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. "ಶಕೀಬ್ ಅವರ ಇನ್ನಿಂಗ್ಸ್‌ನ ಆರಂಭದಲ್ಲಿ ಅವರ ಎಡ ತೋರು ಬೆರಳಿಗೆ ಗಾಯವಾಯಿತು. ಆದರೆ, ಅವರು ಟ್ಯಾಪಿಂಗ್ ಮತ್ತು ನೋವು ನಿವಾರಕಗಳೊಂದಿಗೆ ಬ್ಯಾಟಿಂಗ್ ಮುಂದುವರಿಸಿದರು. ಪಂದ್ಯದ ನಂತರ ದೆಹಲಿಯಲ್ಲಿ ಮಾಡಿದ ತುರ್ತು ಎಕ್ಸ್ - ರೇಯಲ್ಲಿ ಅವರ ಮೂಳೆಗೆ ಪೆಟ್ಟಾಗಿರುವುದು ಕಂಡು ಬಂದಿದೆ. ಅವರಿಗೆ ಚೇತರಿಕೆ ಮೂರರಿಂದ ನಾಲ್ಕು ವಾರಗಳ ಅಗತ್ಯ ಇದೆ. ಹೀಗಾಗಿ ಶಕೀಬ್ ತಮ್ಮ ಪುನರ್ವಸತಿ ಪ್ರಾರಂಭಿಸಲು ಇಂದು ಬಾಂಗ್ಲಾದೇಶಕ್ಕೆ ತೆರಳುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರ ಶ್ರೀಲಂಕಾದ ವಿರುದ್ಧ ಶಕೀಬ್ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಬ್ಯಾಟಿಂಗ್ನಲ್ಲಿ ಅವರು 65 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡ 82 ರನ್ ಗಳಿಸಿದರು, ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದ ಅವರು 2 ವಿಕೆಟ್ ಸಹ ಪಡೆದಿದ್ದರು. ಬ್ಯಾಟಿಂಗ್ನ 82 ರನ್ನ ಕೊಡುಗೆ ಲಂಕಾ ವಿರುದ್ಧ 3 ವಿಕೆಟ್ಗಳ ಜಯಕ್ಕೆ ಕಾರಣವಾಯಿತು.
ಶಕೀಬ್ ವಿರುದ್ಧ ಕ್ರೀಡಾ ಸ್ಪೂರ್ತಿ ಬಗ್ಗೆ ಚರ್ಚೆ:ಆಟದ ಸಮಯದಲ್ಲಿ ಮೈದಾನಕ್ಕೆ ತಡವಾಗಿ ಬಂದ ಏಂಜೆಲೊ ಮ್ಯಾಥ್ಯೂಸ್‌ಗೆ ಟೈಮ್ಡ್ ಔಟ್ ನೀಡುವಂತೆ ಶಕೀಬ್ ಮನವಿ ಮಾಡಿದರು. ಅವರ ಮನವಿಯಂತೆ ಮ್ಯಾಥ್ಯೂಸ್ ಒಂದು ಬಾಲ್ ಎದುರಿಸದೇ ಮೈದಾನದಿಂದ ಔಟ್ ಆಗಿ ಹೊರನಡೆಯ ಬೇಕಾಯಿತು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೈಮ್ ಔಟ್ ಆದ ಮೊದಲ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಆದರೆ, ಇದಕ್ಕೆ ಮನವಿ ಮಾಡಿದ ಮೊದಲ ನಾಯಕ ಶಕೀಬ್ ಆದರು. ಹಸನ್ ಅವರ ಈ ನಡೆಗೆ ಪರ ವಿರೋಧ ಚರ್ಚೆಗಳೂ ನಡೆಯುತ್ತಿದೆ.
ಇದನ್ನೂ ಓದಿ:ಭಾರತದ ಎದುರು ರಚಿನ್ ವಿಶ್ವಕಪ್ ಫೈನಲ್ನಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ: ಅಜ್ಜ ಬಾಲಕೃಷ್ಣ