ಗುಂಟೂರು (ಆಂಧ್ರಪ್ರದೇಶ) :ಭಾರತ ತಂಡ 2022ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದೆ. ಯುವ ಆಟಗಾರರ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ.
ತಂಡದಲ್ಲಿದ್ದ ಭರವಸೆಯ ಆಟಗಾರರಲ್ಲಿ ಶೇಖ್ ರಶೀದ್ ಕೂಡ ಒಬ್ಬರು. ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ 17 ವರ್ಷದ ಶೇಖ್ ರಶೀದ್ ತನ್ನದೇ ಆದ ಐಡೆಂಟಿಟಿ ಮೂಡಿಸಿದ್ದಾರೆ.
ಶೇಖ್ ರಶೀದ್ ಅಂಡರ್-19 ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ಶೇಖ್ ರಶೀದ್, ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ 50, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 95, ಬಾಂಗ್ಲಾದೇಶ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 19, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ 31ರನ್ ಸೇರಿದಂತೆ 5 ಪಂದ್ಯಗಳಲ್ಲಿ 66.75 ಸರಾಸರಿಯಲ್ಲಿ 267 ರನ್ ಗಳಿಸಿದರು.
ಶೇಖ್ ರಶೀದ್ ವಿಶ್ವಕಪ್ಗೂ ಮುನ್ನ ಯುಎಇಯಲ್ಲಿ ನಡೆದಿದ್ದ ಎಸಿಸಿ ಅಂಡರ್-19 ಏಷ್ಯಾ ಕಪ್ 2021ರ ವಿಜೇತ ತಂಡದ ಭಾಗವಾಗಿದ್ದಾರೆ. ಏಷ್ಯಾ ಕಪ್ 2021ರ ಸೆಮಿಫೈನಲ್‌ನಲ್ಲಿ ಶೇಖ್ ರಶೀದ್ ಬಾಂಗ್ಲಾದೇಶ ವಿರುದ್ಧ 108 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದ್ದರು.
ಬ್ಯಾಂಕ್ ಉದ್ಯೋಗ ತ್ಯಜಿಸಿದ್ದ ತಂದೆ
ರಶೀದ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಅವರ ತಂದೆ ಶೇಖ್ ಬಾಲಿ ಶಾ ಪಾತ್ರ ಮಹತ್ವದ್ದಾಗಿದೆ. ತನ್ನ ಮಗನ ಮೇಲಿನ ಭರವಸೆಯಿಂದ ಅವರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ರಶೀದ್‌ಗೆ ಬ್ಯಾಟಿಂಗ್ ಅಭ್ಯಾಸ ಮಾಡಿಸುವ ಸಲುವಾಗಿ ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿದ್ದರು.