ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ 5 ವಿಕೆಟ್‌ಗಳ ಸೋಲು ಅನುಭವಿಸಿದ್ದು, ಇಂಗ್ಲೆಂಡ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಾಕ್ ಸೋಲಿನ ಬಳಿಕ ಹಾರ್ಟ್ ಬ್ರೋಕನ್ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದ ಪಾಕ್ ವೇಗಿ ಶೋಯಬ್ ಅಖ್ತರ್ಗೆ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದು, ಈ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಶಮಿ ರೀಟ್ವೀಟ್ಗೆ ಪಾಕ್ನ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮೊಹಮ್ಮದ್ ಶಮಿ, 'ಕ್ಷಮಿಸಿ ಸಹೋದರ, ಇದನ್ನು ಕರ್ಮ ಎಂದು ಕರೆಯಲಾಗುತ್ತದೆ' ಎಂದು ರೀಟ್ವೀಟ್ ಮಾಡಿದ್ದರು. ಇದು ಪಾಕ್ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಅಲ್ಲಿನ ಟಿವಿ ಶೋಗಳಲ್ಲಿ ಸುದೀರ್ಘ ಚರ್ಚೆಗಳೂ ನಡೆದಿವೆ. ಟಿವಿ ಶೋವೊಂದರ ವೇಳೆ ಮಾತನಾಡಿರುವ ಶಾಹಿದ್ ಅಫ್ರಿದಿ, ಶಮಿ ಅವರು ಸೆಹ್ವಾಗ್ ಮತ್ತು ಹರ್ಭಜನ್ ಅವರಂತಹ ನಿವೃತ್ತ ಟ್ರೋಲರ್ ಅಲ್ಲ ಎಂದಿದ್ದಾರೆ.
ಅಲ್ಲದೆ, 'ನಾವು ಕ್ರಿಕೆಟಿಗರು, ನಾವು ರಾಯಭಾರಿಗಳು ಮತ್ತು ಮಾದರಿ ಇದ್ದಂತೆ. ಇಂತಹ ವಿಚಾರಗಳಿಗೆ ಅಂತ್ಯಹಾಡಲು ನಾವು ಪ್ರಯತ್ನಿಸಬೇಕು. ನೆರೆಹೊರೆಯವರಾದ ನಾವು ಪರಸ್ಪರ ದ್ವೇಷ ಬಿತ್ತುವ ಕೆಲಸ ಮಾಡಬಾರದು. ನಾವುಗಳೇ ಇಂತಹ ಕೆಲಸ ಮುಂದುವರೆಸಿದರೆ, ಇನ್ನು ಸಾಮಾನ್ಯ ಜನರಿಂದ ಏನು ನಿರೀಕ್ಷಿಸಲು ಸಾಧ್ಯ' ಎಂದು ತೇಪೆ ಹಾಕಿದ್ದಾರೆ.