ಹೈದರಾಬಾದ್(ಡೆಸ್ಕ್) :ವಿಶ್ವ ಕ್ರಿಕೆಟ್ನಲ್ಲಿ ಬದ್ಧ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳೆಂದರೆ ಈ ಎರಡು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಲ್ಲದೆ, ಇಡೀ ವಿಶ್ವವೇ ಕಾದುಕುಳಿತಿರುತ್ತದೆ. ಅದರಲ್ಲೂ ವಿಶ್ವಕಪ್ನಂತಹ ದೊಡ್ಡ ವೇದಿಕೆಯಲ್ಲಿ ಮುಖಾಮುಖಿ ಎಂದರೆ ಕೇಳಬೇಕೆ? ಎರಡೂ ರಾಷ್ಟ್ರಗಳ ಆಟಗಾರರು ಭಾರಿ ಒತ್ತಡದಲ್ಲಿರುತ್ತಾರೆ. ಈ ವಿಚಾರವನ್ನು ಸ್ವತಃ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹೀದ್ ಅಫ್ರಿದಿ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ಮತ್ತು ಭಾರತ ಕಳೆದ ತಿಂಗಳು ಮುಗಿದ ಟಿ20 ವಿಶ್ವಕಪ್ನ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದು, ಭಾರತ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಪಾಕಿಸ್ತಾನ ಪೇಸರ್ ಶಾಹೀನ್ ಶಾ ಅಫ್ರಿದಿ 31 ರನ್ಗಳಿಗೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆದರೆ, ಅವರು ಇದೇ ಮೊದಲ ಬಾರಿಗೆ ಭಾರತದೆದುರು ಆಡುತ್ತಿದ್ದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಹಾಗಾಗಿ, ಶಾಹೀನ್ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ದಿಗ್ಗಜ ಶಾಹೀದ್ ಅಫ್ರಿದಿಗೆ ಕರೆ ಮಾಡಿ ಮಾತನಾಡಿದ್ದರೆಂದು ಸ್ವತಃ ಅಫ್ರಿದಿ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟಿ20 ವಿಶ್ವಕಪ್ನ ಮೊದಲ ಪಂದ್ಯಕ್ಕೂ ಮುನ್ನ ಶಾಹೀನ್ ನನಗೆ ವಿಡಿಯೋ ಕರೆ ಮಾಡಿದ್ದರು. ನಾನು ಸ್ವಲ್ಪ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದರು. ನಾವಿಬ್ಬರು 11-12 ನಿಮಿಷ ಮಾತನಾಡಿದೆವು, ನಾನು ಆತನಿಗೆ, ಆ ದೇವರು ನಿನಗೆ ಉತ್ತಮ ಪ್ರದರ್ಶನ ನೀಡಲು ಈ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಕೆಲವು ವಿಕೆಟ್ ಪಡೆದುಕೊಂಡು ಹೀರೋ ಆಗು ಎಂದು ತಿಳಿಸಿದೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.