ನವದೆಹಲಿ:ಏಷ್ಯಾಕಪ್ 2023ನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದರೆ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡದಿರುವ ಹಿನ್ನೆಲೆಯಲ್ಲಿ ತಟಸ್ಥ ಸ್ಥಳಕ್ಕೆ ವರ್ಗಾಯಿಸುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ ಹೇಳಿದ್ದರು. ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಯೋಜಿಸುವಂತೆ ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಈಗ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಯೋಜನೆ ಬಗೆಗಿನ ಗೊಂದಲಗಳು ಹಾಗೇ ಇವೆ. ಇತ್ತೀಚೆಗೆ ಬಿಸಿಸಿಐ ಸರ್ಕಾರ ನಿರ್ಣಯ ಮಾಡಲಿ ಎಂದೂ ಸಹ ಹೇಳಿತ್ತು. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪಾಕಿಸ್ತಾನಕ್ಕೆ ಭಾರತ ಏಷ್ಯಾ ಕಪ್ಗಾಗಿ ಪ್ರವಾಸ ಮಾಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿ, ನಂತರ ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆ ಈ ಬಗ್ಗೆ ನಿಲುವು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ ಶಾಹಿದ್ ಅಫ್ರಿದಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಭಾರತ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡಬೇಕು ಮತ್ತು ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಸಬೇಕು. ಇದರಿಂದ ಉಭಯ ದೇಶಗಳ ಸಂಬಂಧ ಸುಧಾರಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗಾಗಿ ಇತ್ತೀಚೆಗೆ ಹಲವು ತಂಡಗಳು ನಮ್ಮ ದೇಶಕ್ಕೆ ಭೇಟಿ ನೀಡಿವೆ ಎಂದು ಪಾಕಿಸ್ತಾನದ ಭದ್ರತೆ ಕುರಿತು ಹೇಳಿದ್ದಾರೆ.
"ಭಾರತದಲ್ಲಿ ನಮಗೂ ಭದ್ರತೆಯ ಅಪಾಯವಿತ್ತು, ಆ ನಂತರ ಎರಡೂ ದೇಶಗಳ ಸರ್ಕಾರ ಅನುಮತಿ ನೀಡಿದರೆ ನಾವು ಖಂಡಿತವಾಗಿಯೂ ಭೇಟಿ ನೀಡುತ್ತೇವೆ" ಎಂದು ಅಫ್ರಿದಿ ಹೇಳಿದ್ದಾರೆ. ತಮ್ಮ ಸಂದರ್ಶನದಲ್ಲಿ ಅವರು, ಉಭಯ ದೇಶಗಳ ನಡುವೆ ಕ್ರಿಕೆಟ್ ನಡೆಯಲು ಅವಕಾಶ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.