ಮುಂಬೈ (ಮಹಾರಾಷ್ಟ್ರ): ಐಸಿಸಿ ಪುರುಷರ ವಿಶ್ವಕಪ್ 2023ರ ಮೊದಲ ಪ್ರೋಮೋವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ ಬಿಡುಗಡೆ ಮಾಡಿದೆ. ಬಾಲಿವುಡ್ ನಟ ಶಾರುಖ್ ಖಾನ್ ಈ ವಿಶ್ವಕಪ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಕ್ರಿಕೆಟ್ ಹಾಗೂ ಕಿಂಗ್ ಖಾನ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಈ ಬಾರಿ ವಿಶ್ವಪಕ್ ಟೂರ್ನಿ ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಐಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ವಿಶ್ವಕಪ್ ಪ್ರೋಮೋ ವಿಡಿಯೋವನ್ನು ಪೋಸ್ಟ್ ಮಾಡಿದೆ. 'ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಇತಿಹಾಸ ಬರೆಯಲಾಗುತ್ತದೆ. ಕನಸುಗಳು ನನಸಾಗುತ್ತವೆ. ಇದಕ್ಕೆ ಬೇಕಾಗಿರುವುದು ಕೇವಲ ಒಂದು ದಿನ' ಎಂದು ಐಸಿಸಿ ಬರೆದುಕೊಂಡಿದೆ. 2 ನಿಮಿಷ 13 ಸೆಕೆಂಡ್‌ಗಳ ವಿಡಿಯೋವು ಹಿಂದಿನ ವಿಶ್ವಕಪ್ ಪಂದ್ಯಗಳ ಸ್ಮರಣೀಯ ಕ್ಷಣಗಳ ಗುಚ್ಛವನ್ನು ಒಳಗೊಂಡಿದೆ.
ಇದನ್ನೂ ಓದಿ:ಫ್ರಾಂಚೈಸಿ ಮಾದರಿಗೆ ಮರಳಿದ ಮಹಾರಾಜ ಟ್ರೋಫಿ.. ಹೊಸದಾಗಿ ಎಂಟ್ರಿ ಕೊಡಲಿರುವ ಶಿವಮೊಗ್ಗ, ಮಂಗಳೂರು
ಈ ಪ್ರೋಮೋದ ಹಿನ್ನೆಲೆ ಧ್ವನಿಯೊಂದಿಗೆ ನಿರೂಪಣೆಯನ್ನು ಶಾರುಖ್ ಖಾನ್ ಮಾಡಿದ್ದಾರೆ. ಪ್ರೋಮೋ ಕೊನೆಯಲ್ಲಿ 'ಚಕ್ ದೇ ಇಂಡಿಯಾ' ಖ್ಯಾತಿಯ ನಟ ಶಾರುಖ್ ಕ್ರಿಕೆಟ್ ವಲ್ಡ್ಕಪ್ ಟ್ರೋಫಿಯೊಂದಿಗೆ ಕಾಣಿಸಿಕೊಳ್ಳುತ್ತಾರೆ. 'ಇದುವರೆಗೆ ಕನಸು ಕಂಡ, ದೂಡಿದ ಮತ್ತು ಬದುಕಿದ ಎಲ್ಲದಕ್ಕೂ ಒಂದು ದಿನ ಬೇಕು' ಎಂದು ಕಿಂಗ್ ಖಾನ್ ಹೇಳುವ ಮೂಲಕ ಪ್ರೋಮೋ ಕೊನೆಗೊಳ್ಳುತ್ತದೆ.
ಈ ವಿಡಿಯೋದಲ್ಲಿ ಹೆಸರಾಂತ ಕ್ರಿಕೆಟಿಗರಾದ ಜೆಪಿ ಡುಮಿನಿ, ಶುಭಮನ್ ಗಿಲ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾಲಿ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ಮುತ್ತಯ್ಯ ಮುರಳೀಧರನ್, ಜಾಂಟಿ ರೋಡ್ಸ್ ಮತ್ತು ಜೆಮಿಮಾ ರೋಡ್ರಿಗಸ್ ಸಹ ಕಾಣಿಸಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಯ ಒಂಬತ್ತು ನವರಸ ಭಾವನೆಗಳನ್ನು ಪ್ರೋಮೋ ಪ್ರದರ್ಶಿಸುತ್ತಿದೆ. ವೇದನೆ, ಶೌರ್ಯ, ವೈಭವ, ಸಂತೋಷ, ಉತ್ಸಾಹ, ಶಕ್ತಿ, ಹೆಮ್ಮೆ, ಗೌರವ ಮತ್ತು ಆಶ್ಚರ್ಯ... ಈ ಎಲ್ಲವನ್ನೂ ಅನುಭವಿಸಲು ಒಂದು ದಿನ ಹೇಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಚಿತ್ರಿಸಲಾಗಿದೆ.
ಇದನ್ನೂ ಓದಿ:Virat Kohli 500:ಕೊಹ್ಲಿಯ 500ನೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹೆಡ್ ಕೋಚ್ ದ್ರಾವಿಡ್ ಬಣ್ಣನೆ
ವಿಶ್ವಕಪ್ ಪ್ರೋಮೋದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 'ಕಿಂಗ್ ಖಾನ್ ಇನ್ ದಿ ಬಿಲ್ಡಿಂಗ್', 'ಶಾರುಖ್ ಖಾನ್ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ', 'ಚಕ್ ದೇ! ಇಂಡಿಯಾದ ಥೀಮ್ ನಮ್ಮ ಮನಸ್ಸಿನಲ್ಲಿ ಪ್ಲೇ ಆಗುತ್ತಿದೆ' ಎಂದು ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಪಕ್ ಅಭಿಯಾನ ಪ್ರಾರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ಮುಖಾಮಖಿಯಾಗಿವೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಶುರು ಮಾಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅ.15ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ.
ಇದನ್ನೂ ಓದಿ:Asia Cup: ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಪ್ರಕಟ: ಸೆ.2ರಂದು ಭಾರತ - ಪಾಕ್ ಮುಖಾಮಖಿ!