ಮುಂಬೈ (ಮಹಾರಾಷ್ಟ್ರ): ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತೀಯ ಮಹಿಳಾ ತಂಡ ಭರ್ಜರಿ ಶುಭಾರಂಭ ಮಾಡಿದೆ. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರ ಆಕರ್ಷಕ ಅರ್ಧಶತಕ ಮತ್ತು ಟಿಟಾಸ್ ಸಾಧು ಮಾರಕ ಬೌಲಿಂಗ್ ನೆರವಿನೊಂದಿಗೆ ಟೀಂ ಇಂಡಿಯಾ 9 ವಿಕೆಟ್ಗಳ ಅಂತರದ ಗೆಲುವಿನ ನಗೆ ಬೀರಿದೆ. ಈ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿದೆ.
ನವಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ವನಿತೆಯರು 19.2 ಓವರ್ಗಳಲ್ಲಿ 141 ರನ್ಗಳಿಗೆ ಸರ್ವಪತನ ಕಂಡಿದ್ದರು. ಈ ಗುರಿ ಬೆನ್ನಟ್ಟಿದ ಭಾರತೀಯ ವನಿತೆಯರು ಕೇವಲ 1 ವಿಕೆಟ್ ನಷ್ಟಕ್ಕೆ 17.4 ಓವರ್ಗಳಲ್ಲಿ 145 ರನ್ ಸಿಡಿಸಿ ಜಯಭೇರಿ ಬಾರಿಸಿದರು. ಟೀಂ ಇಂಡಿಯಾದ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಭರ್ಜರಿ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ವಿರುದ್ಧ ಟಿ20 ಇತಿಹಾಸದಲ್ಲೇ ಮೊದಲ ವಿಕೆಟ್ಗೆ 137 ರನ್ಗಳ ಜೊತೆಯಾಟ ನೀಡಿ ತಂಡದ ಸುಲಭ ಗೆಲುವಿಗೆ ಕಾರಣರಾದರು.
ಉಭಯ ಆಟಗಾರ್ತಿಯರು ಅತ್ಯುತ್ತಮ ಹೊಡೆತಗಳೊಂದಿಗೆ ತಮ್ಮ ಅರ್ಧಶತಕಗಳನ್ನು ಪೂರೈಸಿದರು. ಎದುರಾಳಿ ಬೌಲರ್ಗಳನ್ನು ದಂಡಿಸಿದ ಈ ಜೋಡಿ 15.2 ಓವರ್ಗಳಿಗೆ 137 ರನ್ಗಳನ್ನು ಕಲೆ ಹಾಕಿತು. ಈ ನಡುವೆ ಸ್ಮೃತಿ ಮಂಧಾನ ಅವರು ಜಾರ್ಜಿಯಾ ವೇರ್ಹ್ಯಾಮ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ನಿರ್ಮಿಸಿದರು. 103.86ಕ್ಕೂ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಮಂಧಾನ 52 ಎಸೆತಗಳಲ್ಲಿ ಏಳು ಭರ್ಜರಿ ಬೌಂಡರಿ, ಒಂದು ಸಿಕ್ಸರ್ ಸಮೇತವಾಗಿ 54 ರನ್ ಬಾರಿಸಿದರು.