ಬ್ರಿಸ್ಟೋಲ್(ಇಂಗ್ಲೆಂಡ್):ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೆಹ್ವಾಗ್ ಎಂದು ಖ್ಯಾತರಾಗಿರುವ 17 ವರ್ಷದ ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮತ್ತೊಂದು ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 96ರನ್ಗಳಿಕೆ ಮಾಡಿದ್ದ ವರ್ಮಾ ಎರಡನೇ ಇನ್ನಿಂಗ್ಸ್ನಲ್ಲೂ ಅರ್ಧಶತಕ ಸಿಡಿಸುವ ಮೂಲಕ ಇನ್ನೊಂದು ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಹೌದು, ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲೂ ಅರ್ಧಶತಕ ಗಳಿಕೆ ಮಾಡಿರುವ ಶೆಫಾಲಿ ವರ್ಮಾ, ಈ ದಾಖಲೆ ಬರೆದಿರುವ ಅತಿ ಕಡಿಮೆ ವಯಸ್ಸಿನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೆಬ್ಯು ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅರ್ಧಶತಕ (96, 55*)ಗಳಿಕೆ ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಜೆಸ್ಸಿಕಾ ಲೂಯಿಸ್ ಜೊನಾಸ್ಸೆನ್ ಇಂಗ್ಲೆಂಡ್ ವಿರುದ್ಧದ ಡೆಬ್ಯು ಟೆಸ್ಟ್ನ ಎರಡು ಇನ್ನಿಂಗ್ಸ್ಗಳಲ್ಲೂ ಅರ್ಧಶತಕ ಗಳಿಕೆ ಮಾಡಿದ್ದರು.
ಇದನ್ನೂ ಓದಿರಿ: ಶಹಬ್ಬಾಸ್ ಶೆಫಾಲಿ! ಚೊಚ್ಚಲ ಟೆಸ್ಟ್ ಪಂದ್ಯದಲ್ಲೆ ದಾಖಲೆ ಬರೆದ 17ರ ಪೋರಿ!
ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಶೆಫಾಲಿ ವರ್ಮಾ ಹೊರತುಪಡಿಸಿ ಆಸ್ಟ್ರೇಲಿಯಾದ ಜೊನಾಸ್ಸೆನ್, ಶ್ರೀಲಂಕಾದ ವನೆಸ್ಸಾ ಬೋವೆನ್, ಇಂಗ್ಲೆಂಡ್ನ ಲೆಸ್ಲೆ ಕುಕ್ ಹಾಗೂ ಮತ್ತೆ ಇಬ್ಬರು ಮಹಿಳಾ ಕ್ರಿಕೆಟರ್ಸ್ ಟೆಸ್ಟ್ನ ಪದಾರ್ಪಣೆ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯ ಇದಾಗಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಭಾರತ 231ರನ್ಗಳಿಗೆ ಆಲೌಟ್ ಆಗಿ 165ರನ್ಗಳ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ತಂಡ 396ರನ್ಗಳಿಕೆ ಮಾಡಿದೆ.
ಫಾಲೋಆನ್ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತೀಯ ತಂಡ ಮೊದಲ ವಿಕೆಟ್ ಕಳೆದುಕೊಂಡು 83ರನ್ಗಳಿಕೆ ಮಾಡಿದ್ದು, ಈಗಲೂ 82ರನ್ಗಳ ಹಿನ್ನಡೆಯಲ್ಲಿದೆ. ಮೈದಾನದಲ್ಲಿ 55ರನ್ಗಳಿಕೆ ಮಾಡಿರುವ ಶೆಫಾಲಿ ಹಾಗೂ 18 ರನ್ಗಳಿಸಿರುವ ದೀಫ್ತಿ ಶರ್ಮಾ ಇದ್ದಾರೆ. 8ರನ್ಗಳಿಕೆ ಮಾಡಿ ಸ್ಮೃತಿ ಮಂದಾನಾ ವಿಕೆಟ್ ಒಪ್ಪಿಸಿದ್ದಾರೆ.