ನವದೆಹಲಿ:ವಿಶ್ವವೇ ಕಾಯುತ್ತಿರುವ ಏಕದಿನ ವಿಶ್ವಕಪ್ಗೆ ಇನ್ನು 8 ದಿನಗಳು ಮಾತ್ರ ಬಾಕಿ ಉಳಿದಿದ್ದು, ಕ್ರೀಡಾಕೂಟದ ಮೇಲೆ ಖಲಿಸ್ತಾನಿ ಉಗ್ರರ ಕರಿನೆರಳು ಬಿದ್ದಿದೆ. ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ(ಎಸ್ಎಫ್ಜೆ) ಉಗ್ರರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ಖಲಿಸ್ತಾನಿ ಪರ ಘೋಷಣೆಗಳನ್ನು ಗೀಚುತ್ತಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಖಲಿಸ್ತಾನಿಗಳು ಈಗ ಭಾರತದಲ್ಲೂ ಆಟಾಟೋಪ ಶುರುವಿಟ್ಟುಕೊಂಡಿದ್ದಾರೆ. ದೆಹಲಿಯಲ್ಲಿ ಗೋಡೆಗಳ ಮೇಲೆ ಭಾರತ ವಿರೋಧಿ ಹೇಳಿಕೆಗಳನ್ನು ಬರೆದಿದ್ದಾರೆ. ದೆಹಲಿ, ಅಹಮದಾಬಾದ್ನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ವೇಳೆ ಖಲಿಸ್ತಾನಿಗಳು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ಗೆ ಅಡ್ಡಿಪಡಿಸುವ ಉದ್ದೇಶ:ನಿಜ್ಜರ್ ಹತ್ಯೆಗೆ ಪ್ರತೀಕಾರವಾಗಿ ಖಲಿಸ್ತಾನಿ ಉಗ್ರರು ದೆಹಲಿ, ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವಕಪ್ ಪಂದ್ಯಗಳಿಗೆ ಅಡ್ಡಿ ಉಂಟು ಮಾಡುವುದು ಖಲಿಸ್ತಾನಿ ಬೆಂಬಲಿಗರ ಗುರಿಯಾಗಿದೆ. ಹೀಗಾಗಿ ಇದನ್ನು ಮಟ್ಟಹಾಕಲು ಕ್ರೀಡಾಂಗಣಗಳ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ, ಉತ್ತರಪ್ರದೇಶದ ಅಹಮದಾಬಾದ್ನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ನ ಪಂದ್ಯಗಳಿಗೆ ಅಡ್ಡಿ ಉಂಟಾಗುವ ಮಾಹಿತಿ ಸಿಕ್ಕಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಗೃಹ ಸಚಿವಾಲಯವು ಬಿಎಸ್ಎಫ್, ಸಿಆರ್ಪಿಎಫ್, ಆರ್ಎಎಫ್ ಮತ್ತು ಐಟಿಬಿಪಿ ಪಡೆಗಳನ್ನು ನಿಯೋಜಿಸಿದೆ. ಖಲಿಸ್ತಾನ್ ಪರ ಉಗ್ರರು ನಡೆಸಬಹುದಾದ ಚಟುವಟಿಕೆಗಳ ಮೇಲೆ ಕಣ್ಣಿಡಲು ಹಲವಾರು ಸ್ಥಳಗಳಲ್ಲಿ ಭದ್ರತಾ ಪಡೆಗಳ ಗಸ್ತು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.