ನವದೆಹಲಿ: ಭಾರತ ತಂಡದ ಕೆರಿಬಿಯನ್ ನಾಡಿನಲ್ಲಿ 2022ರ ಅಂಡರ್ 19 ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆಯ 5ನೇ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ಪಯಣದಲ್ಲಿ ಭಾರತ ತಂಡದ ಯುವ ಪಡೆ ಮತ್ತು ಸಿಬ್ಬಂದಿ ಎದುರಿಸಿದ ಯಾತನೆಯನ್ನು ತಂಡದ ವ್ಯವಸ್ಥಾಪಕರಾಗಿದ್ದ ಸಿಕ್ಕೀಂ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ ಲೋಬ್ಜಾಂಗ್ ಜಿ. ತೆನ್ಸಿಂಗ್ ಬಿಚ್ಚಿಟ್ಟಿದ್ದಾರೆ.
ವಿಶ್ವಕಪ್ಗಾಗಿ ಕೆರಿಬಿಯನ್ ನಾಡಿನಲ್ಲಿ ಕಾಲಿಟ್ಟ ದಿನದಿನವೇ ಮೊದಲು ವ್ಯಾಕ್ಸಿನೇಷನ ಹಾಕಿಸಿಕೊಂಡಿಲ್ಲ ಎನ್ನುವ ಕಾರಣದಿಂದ ವಿಶ್ವಕಪ್ ಎತ್ತಿ ಹಿಡಿಯಲು ಪ್ರಮುಖ ಪಾತ್ರವಹಿಸಿದ್ದ ಎಡಗೈ ವೇಗಿ ರವಿಕುಮಾರ್, ಆರಂಭಿಕ ಅಂಗ್ಕ್ರಿಶ್ ರಘುವಂಶಿ ಸೇರಿದಂತೆ 7 ಭಾರತೀಯ ಆಟಗಾರರನ್ನು ವಿಮಾನ ಏರಲು ಪೋರ್ಟ್ ಆಫ್ ಸ್ಪೇನ್ನಲ್ಲಿ ಅವಕಾಶ ಕೊಟ್ಟಿರಲಿಲ್ಲ. ನಂತರ ಐಸಿಸಿ, ಬಿಸಿಸಿಐ ಹಾಗೂ ಟ್ರೆನಿಡಾಡ್ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಇತ್ಯರ್ಥ ಮಾಡಿತು ಎಂದು ತೆನ್ಸಿಂಗ್ ಹೇಳಿದ್ದಾರೆ.
ನಾವು ಪೋರ್ಟ್ ಆಫ್ ಸ್ಪೇನ್ ತಲುಪಿದಾಗ ಚಾರ್ಟೆಡ್ ವಿಮಾನದಲ್ಲಿ ಗಯಾನಗೆ ತೆರಳಬೇಕಿತ್ತು. ಆದರೆ 7 ಆಟಗಾರರು ಕೋವಿಡ್ ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ತಡೆಹಿಡಿದರು, ನಮ್ಮ ದೇಶದಲ್ಲಿ ಇನ್ನೂ ಈ ವರ್ಗದವರಿಗೆ ಲಸಿಕೆ ನೀಡುತ್ತಿಲ್ಲ ಎಂದರೂ ಅವರು ಕೇಳದೆ, ಮುಂದಿನ ವಿಮಾನದಲ್ಲಿ ವಾಪಸ್ ತೆರಳುವಂತೆ ಸೂಚಿಸಿದರು. ಆದರೆ ನಾವು ಅಲ್ಲೇ ಹತ್ತಿರದ ಹೋಟೆಲ್ನಲ್ಲಿ ತಂಗಿದ್ದು, ಐಸಿಸಿ, ಸ್ಥಳೀಯ ಸರ್ಕಾರದ ನೆರವಿನಿಂದ ಸಮಸ್ಯೆಯನ್ನು ಬಗೆಹರಿಸಿಕೊಂಡೆವು ಎಂದು ಸಿಕ್ಕೀಂ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ ಪಿಟಿಐಗೆ ತಿಳಿಸಿದ್ದಾರೆ.
ಕೋವಿಡ್ 19 ಪಾಸಿಟಿವ್..ಆರಂಭದ ಸಮಸ್ಯೆಯನ್ನು ಹೇಗೋ ನಿವಾರಿಸಿಕೊಂಡು ಹೋದ ತಂಡಕ್ಕೆ ಮೊದಲ ಪಂದ್ಯದ ಬಳಿಕ ಕೋವಿಡ್ 19 ವಕ್ಕರಿಸಿತು. ನಾಯಕ ಯಶ್ ಧುಲ್, ಉಪನಾಯಕ ಶೇಕ್ ರಶೀದ್ ಸೇರಿ 6 ಆಟಗಾರರು ಸೋಂಕಿಗೆ ತುತ್ತಾದರು. ಇದು ತಂಡದ ಎಸ್ಎಲ್ಒ ರವೀಂದ್ರನ್ ಅವರಿಂದ ತಂಡಕ್ಕೆಲ್ಲಾ ಹರಡಿಕೊಂಡಿತ್ತು. ಆದರೆ 2 ಲೀಗ್ ಪಂದ್ಯಗಳಿಂದ ಹೊರ ಉಳಿದಿದ್ದ ಎಲ್ಲಾ ಆಟಗಾರರನ್ನು ಸೇರಿ ಆಡಿ ಭಾರತ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡೆವು.