ನವದೆಹಲಿ: ಭಾರತದಲ್ಲಿ ನಡೆಯಲಿರುವ ಪಂದ್ಯಗಳ ಪ್ರಸಾರದ ಐದು ವರ್ಷಗಳ ಹಕ್ಕುಗಳನ್ನು ಪಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೆಂಡರ್ ಕರೆದಿದೆ. 2023 ರಿಂದ 2027ರ ವರೆಗಿನ ಪಂದ್ಯಗಳ ಡ್ರಾಫ್ಟ್ನ್ನು ಈ ವೇಳೆ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಹೆಚ್ಚಿನ ಪಂದ್ಯಗಳಲ್ಲಿ ಎದುರಿಸಲಿದೆ. ಭಾರತ ತವರು ನೆಲದಲ್ಲಿ ಆಡಲಿರುವ 88 ಪಂದ್ಯಗಳಲ್ಲಿ 39ನ್ನು ಆಸಿಸ್ ಮತ್ತು ಇಂಗ್ಲೆಂಡ್ ವಿರುದ್ಧವೇ ಆಡಲಿದೆ.
ವಿಶ್ವಕಪ್ಗೆ ಮುನ್ನ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಬರಲಿದ್ದು, 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ನಂತರ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ವಿಶ್ವಕಪ್ ನಂತರ ಆಸ್ಟ್ರೇಲಿಯಾದ ವಿರುದ್ಧ ಭಾರತ 2024ರ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ 5 ಟಿ20 ಪಂದ್ಯಗಳನ್ನು ಆಡಲಿದೆ. ಈ ಐದು ಪಂದ್ಯಗಳು ನವೆಂಬರ್ 23 ರಿಂದ ಡಿಸೆಂಬರ್ 3ರ ವರೆಗೆ ನಡೆಯಲಿದೆ. 2027ರ ಜನವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಐದು ಟೆಸ್ಟ್ ಪಂದ್ಯಕ್ಕಾಗಿ ಭಾರತಕ್ಕೆ ಬರಲಿದೆ.
ಭಾರತ ಪ್ರವಾಸದಲ್ಲಿ ಇಂಗ್ಲೆಂಡ್: 2024ರಲ್ಲಿ ಇಂಗ್ಲೆಂಡ್ ಜನವರಿ 25 ರಿಂದ ಮಾರ್ಚ್ 11ರ ವರೆಗೆ ಭಾರತದ ವಿರುದ್ಧ ಐದು ಟೆಸ್ಟ್‌ಗಳನ್ನು ಆಡಲು ಬರಲಿದೆ, ಇವುಗಳ ಸ್ಥಳಗಳು ಹೈದರಾಬಾದ್, ವಿಶಾಖಪಟ್ಟಣಂ, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾ ಎಂದು ಹೇಳಲಾಗಿದೆ. 2025 ರ ಜನವರಿ ಮತ್ತು ಫೆಬ್ರವರಿಯಲ್ಲಿ ಎಂಟು ವೈಟ್ ಬಾಲ್ ಪಂದ್ಯಗಳು ನಡೆಯಲಿದೆ. ಅದರಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ಇರಲಿದೆ. 2028ರ ಜನವರಿಯಿಂದ ಮಾರ್ಚ್‌ನಲ್ಲಿ ಇಂಗ್ಲೆಂಡ್ ಭಾರತದಲ್ಲಿ ಐದು ಟೆಸ್ಟ್‌ಗಳನ್ನು ಆಡುವುದರೊಂದಿಗೆ ಪ್ರಸಾರದ ಹಕ್ಕು ಮುಕ್ತಾಯವಾಗಲಿದೆ.
ಬಿಡ್ಡಿಂಗ್ ಬಗ್ಗೆ ಆಗುತ್ತಿರುವ ವಿಶ್ಲೇಷಣೆಯಲ್ಲಿ "ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಹೆಚ್ಚು ಗಮನಾರ್ಹವಾಗಿದೆ. ಇದು ಐದು ವರ್ಷದ ಋತುವಿನಲ್ಲಿ ಹೆಚ್ಚು ಗಮನ ಸೆಳೆಯುವ ಪಂದ್ಯಗಳು ಎಂದು ಪರಿಗಣಿಸಲಾಗುತ್ತದೆ. ವಿಶ್ವಕಪ್ಗೂ ಮುನ್ನ ಮತ್ತು ನಂತರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳು ಮೊದಲು ಆಕರ್ಷಕವಾಗಿ ಕಾಣಲಿದೆ. ವಿಶ್ವಕಪ್ನ ಪಂದ್ಯಗಳ ಪ್ರಸಾರಕ್ಕೆ ಈಗಾಗಲೇ ಮಾಧ್ಯಮಗಳು ಹೂಡಿಕೆ ಮಾಡಿರುವುದರಿಂದ ಬಿಸಿಸಿಐ ಬಿಡ್ಡಿಂಗ್ಗೆ ಹಣ ಒದಗಿಸುವುದು ಸಂಸ್ಥೆಗಳಿಗೆ ಸವಾಲಾಗಿದೆ" ಎಂದು ಹೇಳಲಾಗುತ್ತಿದೆ.