ದುಬೈ :14ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ತೋರಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ತಾವು ನಿದ್ದೆಯಿಲ್ಲದ ರಾತ್ರಿ ಕಳೆದಿಲ್ಲ ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ಹೇಳಿದ್ದಾರೆ.
ಹರ್ಷಲ್ ಪಟೇಲ್ 2021ರ ಐಪಿಎಲ್‌ನಲ್ಲಿ ಅತ್ಯಂತ ಶ್ರೇಷ್ಠ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಿರುವ 2 ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಹಿತ 9 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ 10 ಪಂದ್ಯಗಳಲ್ಲಿ 23 ವಿಕೆಟ್ ಪಡೆದು ಆರಂಭದಿಂದಲೂ ಆರೆಂಜ್ ಕ್ಯಾಪ್ ತಮ್ಮಲ್ಲೇ ಉಳಿಸಿಕೊಂಡು ಬರುತ್ತಿದ್ದಾರೆ.
ಆದರೆ, ವಿಶ್ವಕಪ್ ತಂಡದಲ್ಲಿ ವೇಗಿಗಳ ವಿಭಾಗದಲ್ಲಿ ಸ್ಪರ್ಧೆ ಕಠಿಣವಾಗಿರುವುದರಿಂದ ಇವರನ್ನು ಆಯ್ಕೆ ಸಮಿತಿ ಪರಿಗಣಿಸಿಲ್ಲ. ಈ ಕುರಿತು ಮಾತನಾಡಿರುವ ಅವರು, ತಮಗೆ ಆಯ್ಕೆ ಸಮಿತಿಯ ನಿರ್ಧಾರದಿಂದ ಯಾವುದೇ ವಿಷಾದವಿಲ್ಲ ಎಂದಿದ್ದಾರೆ.
ನನಗೆ ಯಾವತ್ತೂ ವಿಷಾದವಿಲ್ಲ, ನಾನು ನನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಆ ಸಮಯದಲ್ಲಿ ನನ್ನ ಅತ್ಯುತ್ತಮ ಸಾಮರ್ಥ್ಯದ ಪ್ರಕಾರ ತೆಗೆದುಕೊಂಡಿರುತ್ತೇನೆ. ಇನ್ನು, ವಿಶ್ವಕಪ್ ಆಯ್ಕೆ ನನ್ನ ಕೈಯಿಂದ ಸಂಪೂರ್ಣ ಹೊರಗಿದೆ. ನನ್ನ ಏಕಮಾತ್ರ ಗುರಿ ಎಂದರೆ ನಾನು ಯಾವುದೇ ತಂಡಕ್ಕೆ ಆಡಿದರೂ, ಅದರೂ ಕ್ಲಬ್, ಐಪಿಎಲ್, ರಾಷ್ಟ್ರೀಯ ತಂಡ ಅಥವಾ ಹರಿಯಾಣಕ್ಕೆ ಆಗಿರಬಹುದು.
ನಾನು ಪಂದ್ಯದಲ್ಲಿ ಯಾವುದೇ ಸನ್ನಿವೇಶದಲ್ಲಾದರೂ ತಂಡಕ್ಕೆ ನನ್ನ ಕೈಯಿಂದ ಆದಷ್ಟು ಧನಾತ್ಮಕವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅದು ಬ್ಯಾಟ್ ಅಥವಾ ಬೌಲ್ ಆಗಿರಬಹುದು. ನಾನು ಕ್ರಿಕೆಟ್ ಆಡುವವರೆಗೂ ಇದೇ ನನ್ನ ಗುರಿ ಎಂದು ಹರ್ಷಲ್ ಪಟೇಲ್ ಮುಂಬೈ ವಿರುದ್ಧದ ಪಂದ್ಯದ ನಂತರ ಹೇಳಿದ್ದಾರೆ.
ಇನ್ನು, ಹ್ಯಾಟ್ರಿಕ್ ಪಡೆದ ಬಗ್ಗೆ ಮಾತನಾಡಿ"ನನ್ನ ಜೀವನದಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ಪಡೆದಿದ್ದೇನೆ. ನಾನು ಶಾಲಾ ದಿನಗಳ ಆಟದಲ್ಲೂ ಹ್ಯಾಟ್ರಿಕ್ ಪಡೆದಿಲ್ಲ. ಐಪಿಎಲ್‌ನಲ್ಲಿ ನಾನು ಬಹುತೇಕ ಬಾರಿ 2 ವಿಕೆಟ್ ಪಡೆದಿದ್ದೆ, ಆರು ಬಾರಿ ಮಿಸ್ ಆಗಿತ್ತು. ಇದೇ ಮೊದಲ ಬಾರಿಗೆ ಯಶಸ್ವಿಯಾದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಹಾಲ್ರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಿ: ಅಭಿಮಾನಿಗಳಿಂದ ಬಿಸಿಸಿಐಗೆ ಮನವಿ