ಮುಂಬೈ :ಕ್ರಿಕೆಟ್ ಜಗತ್ತಿನಲ್ಲಿ ಕೋಟ್ಯಂತರ ಮಂದಿ ಎದುರು ನೋಡುವ ಪಂದ್ಯವೆಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ. ರಾಜಕೀಯ ಕಾರಣಗಳಿಂದ ದ್ವಿಪಕ್ಷೀಯ ಸರಣಿಗಳು ಎರಡೂ ರಾಷ್ಟ್ರಗಳ ನಡುವೆ ಸ್ಥಗಿತಗೊಂಡಿವೆ. ಆದರೆ, ಐಸಿಸಿ ಟೂರ್ನಾಮೆಂಟ್ಗಳಲ್ಲಿ ಮಾತ್ರ ಭಾರತ-ಪಾಕ್ ಎದುರಾಗುತ್ತಿವೆ. ಹಾಗಾಗಿ, ಈ ಪಂದ್ಯಗಳು ಹೆಚ್ಚಿನ ಕೂತೂಹಲವನ್ನು ಮೂಡಿಸಿರುತ್ತವೆ.
ಆದರೆ, ಈ ಹೈವೋಲ್ಟೇಜ್ ಪಂದ್ಯಗಳಲ್ಲಿ ಭಾರತವೇ ಪ್ರಾಬಲ್ಯ ಸಾಧಿಸಿದೆ. ಏಕದಿನ ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಆಡಿರುವ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಟಿ20ಯಲ್ಲೂ ಎಲ್ಲಾ 5 ಪಂದ್ಯಗಳಲ್ಲಿ ಗೆದ್ದ ದಾಖಲೆಯನ್ನ ಟೀಂ ಇಂಡಿಯಾ ಹೊಂದಿದೆ.
ಆದರೆ, ವಿಶ್ವದ ಬೇರೆ ರಾಷ್ಟ್ರಗಳ ವಿರುದ್ಧ ಗೆಲ್ಲುವ ಸಾಮರ್ಥ್ಯ ಹೊಂದಿರುವ ಪಾಕ್ ವಿಶ್ವಕಪ್ನಲ್ಲಿ ಮಾತ್ರ ಭಾರತದ ವಿರುದ್ಧ ಮುಗ್ಗರಿಸುತ್ತಿದೆ. ಇದಕ್ಕೆ ಕಾರಣ ಪಾಕಿಸ್ತಾನ ಕ್ರಿಕೆಟಿಗರು ಒತ್ತಡವನ್ನು ನಿಯಂತ್ರಿಸಲಾರರು. ಅಲ್ಲದೆ ಪಂದ್ಯದ ತಯಾರಿಗಿಂತ, ದೊಡ್ಡ ದೊಡ್ಡ ಹೇಳಿಕೆ ಕೊಡುವುದರಲ್ಲೇ ಸದಾ ತಲ್ಲೀನರಾಗಿರುತ್ತಾರೆ ಎಂದು ಭಾರತ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ವಿವರಿಸಿದ್ದಾರೆ.
ನಾವು 2011 ಮತ್ತು 2003ರ ವಿಶ್ವಕಪ್ ತೆಗೆದುಕೊಂಡರೆ, ನಾವು ಅವರಿಗಿಂತ ಕಡಿಮೆ ಒತ್ತಡದಲ್ಲಿದ್ದೆವು. ಯಾಕೆಂದರೆ, ವಿಶ್ವಕಪ್ನಲ್ಲಿ ನಾವು ಅವರಿಗಿಂತ ಉತ್ತಮ ಸ್ಥಾನದಲ್ಲಿದ್ದೆವು. ನನ್ನ ಪ್ರಕಾರ ನಾವು ಆ ಮನೋಭಾವನೆಯಿಂದ ಆಡುವಾಗ ಪಂದ್ಯಕ್ಕೂ ಮುನ್ನ ದೊಡ್ಡ ಹೇಳಿಕೆಗಳನ್ನು ಕೊಡಬಾರದು. ಆದರೆ, ಅವರ ಕಡೆ(ಪಾಕಿಸ್ತಾನ ಮಾಧ್ಯಮಗಳು) ಯಾವಾಗಲು ದೊಡ್ಡ ಹೇಳಿಕೆಗಳೂ ಬರುತ್ತಿರುತ್ತವೆ.