ಭಾರತದಲ್ಲಿ ದೇಶಿಯ ಕ್ರಿಕೆಟ್ನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವರ್ಷ ಪೂರ್ತಿ ನಡೆಸುತ್ತದೆ. ರಣಜಿ, ದುಲಿಪ್ ಟ್ರೋಫಿ, ದೇವದಾರ್ ಕಪ್, ಇರಾನಿ ಕಪ್ ಸಹ ನಡೆಸುತ್ತದೆ. ಆದರೆ ಬಿಸಿಸಿಐಗೆ ಸಂಪಾದನೆಗೆ ದೊಡ್ಡ ಮೂಲ ಐಪಿಎಲ್. ಇಂಡಿಯನ್ ಪ್ರೀಮಿಯರ್ ಲೀಗ್ನಿಂದಾಗಿ ಬಿಸಿಸಿಐ ಶ್ರೀಮಂತ ಆಡಳಿತ ಮಂಡಳಿಯಾಗಿದೆ. ಐಸಿಸಿಯನ್ನೂ ಮೀರಿಸುವಷ್ಟು ಬಂಡವಾಳ ಬಿಸಿಸಿಐ ಬಳಿ ಇದೆ ಎಂಬ ಮಾತಿದೆ.
ಆದರೆ ಬಿಸಿಸಿಐ ದೇಶಿಯ ಕ್ರಿಕೆಟ್ನ್ನು ನಡೆಸಿದರೂ, ಅಲ್ಲಿ ಆಡುವ ಪ್ರತಿಭೆಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರೇ ಹೇಳಿದ್ದಾರೆ. ಅಲ್ಲದೇ ಅವರು ರಣಜಿಯನ್ನು ನಿಲ್ಲಿಸಿ ಬಿಡಿ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಕಾರಣ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾದ ಯುವ ಆಟಗಾರರ ಪಟ್ಟಿಯಲ್ಲಿ ಸರ್ಫರಾಜ್ ಖಾನ್ ಅವರ ಹೆಸರು ಇಲ್ಲದಿರುವುದು.
ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಈ ವಾರದ ಆರಂಭದಲ್ಲಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಡಲಾಗಿದೆ. ಇವರ ಜಾಗಕ್ಕೆ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಬ್ಯಾಟಿಂಗ್ ಕ್ಷೇತ್ರಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕತ್ವಾಡ್ ತಂಡಕ್ಕೆ ಸೇರಿಕೊಂಡ ಹೊಸ ಆಟಗಾರರಾಗಿದ್ದಾರೆ.
ಈ ಇಬ್ಬರು ಬ್ಯಾಟರ್ ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಇದರಿಂದ ಐಪಿಎಲ್ ಬೆನ್ನಲ್ಲೇ ಇಂಗ್ಲೆಂಡ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೀಸಲು ಆಟಗಾರರ ಪಟ್ಟಿಯಲ್ಲಿ ಇವರ ಹೆಸರು ಕೇಳಿಬಂದಿತ್ತು. ರುತುರಾಜ್ ವಿವಾಹದ ಕಾರಣ ಲಂಡನ್ ಪ್ರವಾಸದಿಂದ ಹೊರಗುಳಿದರು. ಅವರ ಬದಲಿಯಾಗಿ ಜೈಸ್ವಾಲ್ ಅವರಿಗೆ ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಕಳುಹಿಸಿ ಕೊಡಲಾಗಿತ್ತು.
ರಣಜಿ ಆಟಗಾರರ ಕಡೆಗಣನೆ: ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಐಪಿಎಲ್ ಮಾನದಂಡ ಎಂಬಂತೆ ಬಿಸಿಸಿಐನ ಸೆಲೆಕ್ಷನ್ ಕಮಿಟಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮಾಜಿ ನಾಯಕ ಗವಾಸ್ಕರ್ ಸರ್ಫರಾಜ್ ಖಾನ್ ಅವರ ಆಯ್ಕೆ ಆಗದಿರುವ ಬಗ್ಗೆ ಸುದ್ದಿ ಸಂಸ್ಥೆವೊಂದರ ಚರ್ಚೆಯಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣ ಸತತ ಸರ್ಫರಾಜ್ ಖಾನ್ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆದರೆ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಮಾತ್ರವ ಸ್ಥಾನ ಸಿಗುತ್ತಿಲ್ಲ.
ಅಸಮಾಧಾನ ಹೊರಹಾಕಿದ ಸರ್ಫರಾಜ್ ಖಾನ್:ಸರ್ಫರಾಜ್ ಖಾನ್ ಸಹ ಈಗ ಅಸಮಾಧಾನ ಹೊರಹಾಕಿದ್ದಾರೆ. ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನ ಅವರ ಬ್ಯಾಟಿಂಗ್ ಅಂಕಿಅಂಶವನ್ನು ಕಾಣುವಂತೆ ಹಾಕಿಕೊಂಡಿದ್ದಾರೆ. ಅದರಲ್ಲಿ 53 ಪಂದ್ಯದಿಂದ 80.48 ಸ್ಟ್ರೈಕ್ ರೇಟ್ನಲ್ಲಿ 3380 ರನ್ ಅನ್ನು ಖಾನ್ ಕಲೆ ಹಾಕಿದ್ದಾರೆ. ಅವರ ಆಟದ ಹೈಲೈಟ್ಸ್ ವಿಡಿಯೋದಲ್ಲಿದೆ. ಈ ಮೂಲಕ ಆಯ್ಕೆಗಾರರಿಗೆ ತಾನು ಅರ್ಹ ಎಂಬುದನ್ನು ಬಿಂಬಿಸಿದ್ದಾರೆ.
ಇದನ್ನೂ ಓದಿ:IND vs WI: ವೆಸ್ಟ್ ಇಂಡೀಸ್ ಪ್ರವಾಸದಿಂದ ಪೂಜಾರಗೆ ಕೊಕ್.. ಮೊದಲಿನಿಂದ ಮತ್ತೆ ಆರಂಭಕ್ಕೆ ಚೇತೇಶ್ವರ ಅಣಿ