ಮುಂಬೈ(ಮಹಾರಾಷ್ಟ್ರ):'ಕ್ರಿಕೆಟ್ ದೇವರು' ಎಂದೇ ಪ್ರಸಿದ್ಧರಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ಡೀಪ್‌ಫೇಕ್ ತಂತ್ರಜ್ಞಾನದಿಂದ ಬೇಸರಗೊಂಡಿದ್ದಾರೆ. ತನ್ನ ಡೀಪ್‌ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಹೆಸರಿನಲ್ಲಿ ಕೆಲವರು ಎಕ್ಸ್ ವೇದಿಕೆಯಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ ಎಂದು ದೂರಿದ್ದಾರೆ. ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ, ಇದು ಒಳ್ಳೆಯದಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
"ನಮ್ಮ ದೈನಂದಿನ ಚಟುವಟಿಕೆಗಳು, ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಒಂದು ಅದ್ಭುತ ವೇದಿಕೆ. ಆದರೆ, ಕೆಲವರು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಬೇಸರ ತಂದಿದೆ. ನನ್ನ ಡೀಪ್‌ಫೇಕ್ ಫೋಟೋಗಳು ವೈರಲ್ ಆಗುತ್ತಿರುವುದನ್ನು ನೋಡಿದ್ದೇನೆ. ಕೆಲವರು ಎಕ್ಸ್ನಲ್ಲಿ ನನ್ನ ಹೆಸರಿನ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ. ಎಕ್ಸ್ ಸಂಸ್ಥೆ ನಕಲಿ ಖಾತೆಗಳನ್ನು ಗುರುತಿಸಿ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಸತ್ಯ ಮುಚ್ಚಿಟ್ಟು ಮನರಂಜನೆ ಮಾಡಬೇಡಿ. ಪ್ರಾಮಾಣಿಕ, ನಿಜವಾದ ಸಂವಹನವನ್ನು ಪ್ರೋತ್ಸಾಹಿಸಿ" ಎಂದು ಸಾರಾ ತೆಂಡೂಲ್ಕರ್ ಅಳಲು ವ್ಯಕ್ತಪಡಿಸಿದ್ದಾರೆ.
ಸಾರಾ ಮತ್ತು ಶುಭ್‌ಮನ್: ಇತ್ತೀಚೆಗೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರೊಂದಿಗೆ ಸಾರಾ ತೆಂಡೂಲ್ಕರ್ ಅವರ ತಿರುಚಿದ ಫೋಟೋ ವೈರಲ್ ಆಗಿತ್ತು. ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರೊಂದಿಗಿನ ಫೋಟೋವನ್ನು ಕೆಲವು ಕಿಡಿಗೇಡಿಗಳು ಡೀಪ್‌ಫೇಕ್ ಮಾಡಿದ್ದರು. ಅರ್ಜುನ್ ಬದಲಿಗೆ ಗಿಲ್ ಮುಖವನ್ನು ಎಡಿಟ್ ಮಾಡಲಾಗಿದೆ. ಈ ಹಿಂದೆ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರೊಂದಿಗೆ ಇತ್ತೀಚಿನ ಡೀಪ್‌ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಾರಾ ಕಳವಳ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು.
'ಡೀಪ್‌ಫೇಕ್' ಕಡಿವಾಣಕ್ಕೆ ಹೊಸ ಕಾನೂನು: ಇತ್ತೀಚೆಗೆ ಚಲನಚಿತ್ರ ತಾರೆಯರಾದ ರಶ್ಮಿಕಾ, ಕತ್ರಿನಾ ಕೈಫ್ ಮತ್ತು ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗುತ್ತದೆ. ಸೂಕ್ತವೆನಿಸಿದರೆ ಡೀಪ್‌ಫೇಕ್ ವಿರುದ್ಧ ಹೊಸ ಕಾನೂನು ತರುವುದಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದರು.
ಇದನ್ನೂ ಓದಿ:ತಂದೆಯೊಂದಿಗೆ ಅಭ್ಯಾಸ, ಯೂಟ್ಯೂಬ್ ನೋಡಿ ಆಟ ಸುಧಾರಣೆ: ರಗ್ಬಿಯಲ್ಲಿ ರೈತ ಕುಟುಂಬದ ಶ್ವೇತಾ ಮಿಂಚು