ಮುಂಬೈ : ಭಾರತ ತಂಡದ ಕ್ರಿಕೆಟಿಗ ಪೃಥ್ವಿ ಶಾ ಅವರ ಮೇಲೆ ಈ ವರ್ಷದ ಫೆಬ್ರವರಿಯಲ್ಲಿ ಸಾಮಾಜಿಕ ಮಾಧ್ಯಮ ತಾರೆ ಸಪ್ನಾ ಗಿಲ್ ಎಂಬ ಯುವತಿ ಕಿರುಕುಳ ಮತ್ತು ಹಲ್ಲೆ ಆರೋಪ ಹೊರಿಸಿದ್ದರು. ಈ ಸಂಬಂಧ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣವು ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪೊಲೀಸರು ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ್ದು, ಪೃಥ್ವಿ ಶಾಗೆ ದೊಡ್ಡ ರಿಲೀಫ್ ನೀಡಿದೆ. ಪೃಥ್ವಿ ಶಾ ವಿರುದ್ಧ ಸಪ್ನಾ ಗಿಲ್ ಮಾಡಿರುವ ಎಲ್ಲ ಆರೋಪಗಳೂ ಸುಳ್ಳು ಮತ್ತು ಆಧಾರರಹಿತ ಎಂದು ಪೊಲೀಸರು ಸೋಮವಾರ (ಜೂನ್ 26) ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಘಟನೆ ಏನು?: ಈ ವರ್ಷದ ಫೆಬ್ರವರಿ 15ರಂದು ಪೃಥ್ವಿ ಶಾ ತನ್ನ ಸ್ನೇಹಿತನೊಂದಿಗೆ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪೃಥ್ವಿ ಶಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಅದೇ ವ್ಯಕ್ತಿಗಳು ಮತ್ತೆ ಬಂದು ಇತರರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆಯೂ ಕೇಳಿಕೊಂಡಿದ್ದಾರೆ. ಪೃಥ್ವಿ ಶಾ ಸ್ನೇಹಿತರ ಜೊತೆ ಡಿನ್ನರ್‌ಗೆ ಬಂದಿದ್ದು, ತೊಂದರೆಯಾಗುವುದು ಬೇಡ ಎಂದು ಎರಡನೇ ಬಾರಿಕೆ ಫೋಟೋಗೆ ನಿರಾಕರಿಸಿದ್ದರು.
ಘಟನೆ ವಿಕೋಪಕ್ಕೆ ಹೋಗಿದೆ. ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೃಥ್ವಿ ಶಾ ಸ್ನೇಹಿತನ ದೂರಿನ ಆಧಾರದ ಮೇಲೆ ಪೊಲೀಸರು ಸಪ್ನಾ ಗಿಲ್ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಸಪ್ನಾ ಗಿಲ್ ಅವರನ್ನು ಕೂಡ ಬಂಧಿಸಲಾಗಿತ್ತು. ನಂತರ ಸಪ್ನಾ ಜಾಮೀನಿನ ಮೇಲೆ ಹೊರಬಂದಿದ್ದರು.
ಸಪ್ನಾ ಗಿಲ್ ಮತ್ತು ಪೃಥ್ವಿ ಶಾ ನಡುವಿನ ಘರ್ಷಣೆಯ ಕೆಲವು ವೀಡಿಯೊಗಳು ಹೊರಬಂದಿದ್ದವು. ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಪೃಥ್ವಿ ಶಾ ವಿರುದ್ಧ ಸಪ್ನಾ ಕಿರುಕುಳ ಆರೋಪ ಮಾಡಿದ್ದರು. ಪೊಲೀಸರು ತನ್ನ ಎಫ್‌ಐಆರ್ ದಾಖಲಿಸಿಲ್ಲ ಎಂದು ಸಪ್ನಾ ದೂರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಮಧ್ಯಪ್ರವೇಶದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.