ದುಬೈ: ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ ಬೆನ್ನು ನೋವಿಗೆ( lower - back injury) ಒಳಗಾಗಿದ್ದು, ಮುಂಬರುವ ಟಿ-20 ವಿಶ್ವಕಪ್ ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಂಗಳವಾರ ಖಚಿತಪಡಿಸಿದೆ.
ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ಬೆನ್ನು ನೋವಿನ ಬಗ್ಗೆ ತಿಳಿಸಿದ್ದು, ತಕ್ಷಣವೇ ಅವರನ್ನು ಸ್ಕ್ಯಾನಿಂಗ್ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರಿಗೆ ಗಾಯದ ಇರುವ ಬಗ್ಗೆ ಖಚಿತಪಡಿಸಲಾಗಿದೆ.
ಕರ್ರನ್ ಒಂದೆರಡು ದಿನಗಳ ಐಪಿಎಲ್ ಬಯೋಬಬಲ್ ತೊರೆದು ಇಂಗ್ಲೆಂಡ್ ಮರಳಲಿದ್ದು, ಅಲ್ಲಿ ಇಸಿಬಿಯ ವೈದ್ಯಕೀಯ ತಂಡದಿಂದ ಪರಿಶೀಲನೆಗೆ ಒಳಗಾಗಲಿದ್ದಾರೆ.
ಇನ್ನು ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಕರ್ರನ್ ಜಾಗದಲ್ಲಿ ಮೀಸಲು ಆಟಗಾರನಾಗಿದ್ದ ಅವರ ಅಣ್ಣ ಟಾಮ್ ಕರ್ರನ್ ಸೇರಿಕೊಂಡಿದ್ದಾರೆ. ಮೀಸಲು ಆಟಗಾರ ಸ್ಥಾನಕ್ಕೆ ವೇಗಿ ರೀಸ್ ಟಾಪ್ಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೋರ್ಡ್ ಮಾಹಿತಿ ನೀಡಿದೆ.
23 ವರ್ಷದ ಕರ್ರನ್ 2021ರ ಐಪಿಎಲ್ನಲ್ಲಿ ಸಿಎಸ್ಕೆ ಪರ 9 ಪಂದ್ಯಗಳನ್ನಾಡಿದ್ದು, 9 ವಿಕೆಟ್ ಮತ್ತು 4 ಇನ್ನಿಂಗ್ಸ್ಗಳಿಂದ 56 ರನ್ಗಳಿಸಿದ್ದಾರೆ.
ಇಂಗ್ಲೆಂಡ್ ಅಕ್ಟೋಬರ್ 18ರಂದು ಭಾರತದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಇನ್ನು ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳ ಜೊತೆಗೆ ಸೂಪರ್ 12 ಹಂತದಲ್ಲಿ ಸ್ಪರ್ಧಿಸಲಿದೆ.
ಇದನ್ನು ಓದಿ:ಟಿ20 ವಿಶ್ವಕಪ್ ಆಯೋಜನೆಯಿಂದ ಬಿಸಿಸಿಐ ಪಡೆಯುವ ಲಾಭ ಎಷ್ಟು ಕೋಟಿ ಗೊತ್ತಾ?