ಕೊಚ್ಚಿ (ಕೇರಳ): ಕೇರಳದ ಕೊಚ್ಚಿಯಲ್ಲಿ ಐಪಿಎಲ್ 2023ಕ್ಕೆ ಆಟಗಾರರ ಹರಾಜು ನಡೆಯುತ್ತಿದೆ. ವಿಶೇಷ ಅಂದರೆ, ಮಿಲಿಯನ್ ಡಾಲರ್ ಟೂರ್ನಿಯ ಇತಿಹಾಸದಲ್ಲೇ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರ್ರಾನ್ ದಾಖಲೆಯ 18.5 ಕೋಟಿ ರೂ ಬೆಲೆಗೆ ಮಾರಾಟವಾಗಿದ್ದಾರೆ. ಈ ಮೂಲಕ ಅತ್ಯಂತ ದುಬಾರಿ ಬೆಲೆಯ ಆಟಗಾರರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಸ್ಯಾಮ್ ಕರ್ರಾನ್ ಅವರನ್ನು 18.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿತು. 2021ರಲ್ಲಿ ನಡೆದ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೋರಿಸ್ 16.25 ಕೋಟಿ ರೂ.ಗೆ ಮಾರಾಟವಾಗಿದ್ದರು. ಆಗ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದ ಕ್ರಿಸ್ ಮೋರಿಸ್ ಅತಿ ದುಬಾರಿ ಐಪಿಎಲ್ ಆಟಗಾರರ ಎಂದೆನಿಸಿಕೊಂಡಿದ್ದರು.
ಆದರೆ, ಈ ಬಾರಿ ಐಪಿಎಲ್ನಲ್ಲಿ ಮೋರಿಸ್ ಅವರ ದಾಖಲೆಯನ್ನು ಕರ್ರಾನ್ ಮುರಿದಿದ್ದಾರೆ. ಅಚ್ಚರಿ ಎಂದರೆ, 2019ಕ್ಕೂ ಮುಂಚಿನ ಹರಾಜಿನಲ್ಲಿ ಇವರು ಪಂಜಾಬ್ ಕಿಂಗ್ಸ್ ತಂಡಕ್ಕೆ 7.2 ಕೋಟಿ ರೂ.ಗೆ ಮಾರಾಟವಾಗಿದ್ದರು. ನಂತರದಲ್ಲಿ ಕರ್ರಾನ್ 5.5 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಇದರ ನಡುವೆ 2022ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರ್ರಾನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.
ಗ್ರೀನ್ ಮುಂಬೈಗೆ, ಬೆನ್ ಸ್ಟೋಕ್ಸ್ ಚೆನ್ನೈಗೆ: ಇತ್ತ, ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಕರಿಯಾಗಿರುವ ಕ್ಯಾಮರಾನ್ ಗ್ರೀನ್ 17.5 ಕೋಟಿ ರೂ.ಗೆ ಮಾರಾಟವಾಗಿ ಪ್ರಸ್ತುತ ದುಬಾರಿ ಆಟಗಾರರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬೆನ್ ಸ್ಟೋಕ್ಸ್ ಕೂಡ ದುಬಾರಿ ಬೆಲೆಗೆ ಮಾರಾಟವಾಗಿದ್ದು, 16.25 ರೂಪಾಯಿ ಕೊಟ್ಟು ಚೆನ್ನೈ ಫ್ರಾಂಚೈಸಿ ಕೊಂಡುಕೊಂಡಿದೆ.
ಇದನ್ನೂ ಓದಿ:IPL ಹರಾಜು: ಸ್ಯಾಮ್ ಕರ್ರಾನ್‌ಗೆ ₹18 ಕೋಟಿ ಕೊಟ್ಟ ಪಂಜಾಬ್! ಚೆನ್ನೈ ತಂಡಕ್ಕೆ ಬೆನ್ ಸ್ಟೋಕ್ಸ್