ಈ ಬಾರಿಯ ರಣಜಿ ಟ್ರೋಫಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಫಾರ್ಮ್ ಕೊರತೆಯಿಂದ ಭಾರಿ ಟೀಕೆಗೆ ಒಳಗಾಗಿರುವ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಮುಂಬೈ ಪರ ಶತಕ ಸಿಡಿಸಿದರೆ, ಮೊದಲ ಪ್ರಥಮ ದರ್ಜೆ ಪಂದ್ಯವಾಡಿದ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕ ಯಶ್ ದುಲ್ ಶತಕದ ಸಾಧನೆ ಮಾಡಿದ್ದರು.
ಇದರ ಬೆನ್ನಲ್ಲೇ ಇಂದು ನಡೆದ ಬಿಹಾರ ಮತ್ತು ಮಿಜೋರಾಂ ಪಂದ್ಯದಲ್ಲಿ ಬಿಹಾರದ ಸಕಿಬುಲ್ ಗನಿ ಪದಾರ್ಪಣೆ ಪಂದ್ಯದಲ್ಲೇ (ಪ್ರಥಮ ದರ್ಜೆ) ತ್ರಿಶತಕ(341) ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಪ್ರಥಮ ದರ್ಜೆಯಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ 22 ವರ್ಷದ ಸಕಿಬುಲ್ ಗನಿ ತ್ರಿಶತಕದ ಸಾಧನೆ ಮಾಡಿದ್ದಾರೆ. ಪ್ರಸ್ತುತ ಸಾಲಿನ ರಣಜಿ ಪಂದ್ಯಾವಳಿಯಲ್ಲಿ ಇದು ಮೊದಲ ತ್ರಿಶತಕವಾಗಿದೆ. ಇದಲ್ಲದೇ ಗನಿ ತಾವಾಡಿದ ಮೊದಲ ಪಂದ್ಯದಲ್ಲೇ ಮುನ್ನೂರಕ್ಕಿಂತಲೂ ಹೆಚ್ಚು ರನ್ ಬಾರಿಸಿ ವಿಶ್ವದಾಖಲೆ ಮಾಡಿದ್ದಾರೆ.
ಸಕಿಬುಲ್ ಗನಿ 405 ಎಸೆತಗಳಲ್ಲಿ 56 ಬೌಂಡರಿ, 2 ಸಿಕ್ಸರ್ ಸಮೇತ 341 ರನ್ ಗಳಿಸಿದ್ದಾರೆ. ಗನಿ ಜೊತೆ ಅತ್ಯುತ್ತಮ ಜೊತೆಯಾಟವಾಡಿದ ಬಬುಲ್ ಕುಮಾರ್ 229 ರನ್ ಗಳಿಸಿ ದ್ವಿಶತಕ ಬಾರಿಸಿದರು.
ಇನ್ನು 2018-19ರ ರಣಜಿ ಪಂದ್ಯಾವಳಿಯಲ್ಲಿ ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮಧ್ಯಪ್ರದೇಶದ 22 ವರ್ಷದ ಅಜಯ್ ರೊಹೆರಾ 267 ರನ್ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಸಕಿಬುಲ್ ಗನಿ 341 ರನ್ ಗಳಿಸಿ ತಮ್ಮ ಹೆಸರಿಗೆ ವಿಶ್ವದಾಖಲೆ ಬರೆದುಕೊಂಡಿದ್ದಾರೆ.
ಇನ್ನು ಸಕಿಬುಲ್ ಗನಿಯ ತ್ರಿಶತಕ(341), ಬಬುಲ್ ಕುಮಾರ್ (229) ದ್ವಿಶತಕದ ನೆರವಿನಿಂದ ಬಿಹಾರ ತಂಡ 6 ವಿಕೆಟ್ ನಷ್ಟಕ್ಕೆ 686 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಮಿಜೋರಾಂ ತಂಡ 40/3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಇನ್ನೂ ಎರಡು ದಿನ ಆಟ ಬಾಕಿ ಇದ್ದು, ಮಿಜೋರಾಂ ತಂಡ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ.
ಓದಿ:ನನ್ನನ್ನು ಸಾಬೀತುಪಡಿಸಿಕೊಳ್ಳಲು ನನಗೆ ಅವಕಾಶಗಳು ಬೇಕು: ಯಶ್ ಧುಲ್