ಹೈದರಾಬಾದ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತದ ಯುವ ಆಟಗಾರ ಸಾಯಿ ಸುದರ್ಶನ್ ತಮ್ಮ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಹೌದು. ಗುರುವಾರ (ಡಿ.21) ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಎರಡನೇ ಇನಿಂಗ್ಸ್‌ನ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಅವರು ಹೊಡೆದ ಚೆಂಡನ್ನು ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿಯುವ ಮೂಲಕ ಅಚ್ಚರಿಗೊಳಿಸಿದ್ದಾರೆ.
33.2ನೇ ಓವರ್‌ನಲ್ಲಿ ವೇಗಿ ಆವೇಶ್ ಖಾನ್ ಬೌಲಿಂಗ್ ವೇಳೆ ಮಿಡ್ ಆಫ್ನಲ್ಲಿ ಸಾಯಿ ಸುದರ್ಶನ್ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ, ಕ್ಲಾಸೇನ್ ಬೌಂಡರಿ ಬಾರಿಸಲು ಚೆಂಡನ್ನು ಗಾಳಿಯಲ್ಲಿ ಹೊಡೆದಿದ್ದಾರೆ. ಮಿಡ್ ಆಫ್ನಲ್ಲಿದ್ದ ಸುದರ್ಶನ್ ಹಕ್ಕಿಯಂತೆ ಲಾಂಗ್ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದಾರೆ. ಕ್ಯಾಚ್ ಅನ್ನು ಖಚಿತ ಪಡಿಸಲು ಅಂಪೈರ್ ಕೂಡ ಮೂರನೇ ಅಂಪರ್ ಮೊರೆ ಹೋಗಿದ್ದರು.
ಈ ವೇಳೆ ಚೆಂಡು ನೆಲಕ್ಕೆ ತಾಗದೇ ಕೈಯಲ್ಲೇ ಇರುವುದು ಕಂಡು ಬಂದಿದ್ದು ಕ್ಲಾಸೆನ್ಗೆ ಔಟ್ ಆಗಿರುವುದು ಖಚಿತಗೊಂಡಿತು. ಈ ಮೂಲಕ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಆಟಕ್ಕೆ ಸುದರ್ಶನ್ ಬ್ರೇಕ್ ಹಾಕಿದರು. ಕ್ರೀಸ್ನಿಂದ ನಿರ್ಗಮಿಸಿದ ವೇಳೆಗೆ ಕ್ಲಾಸೆನ್ 22 ಎಸೆತಗಳಲ್ಲಿ 21 ರನ್ ಕಲೆ ಹಾಕಿದ್ದರು. ಒಂದು ವೇಳೆ, ಕ್ರೀಸ್ನಲ್ಲೇ ಉಳಿದಿದ್ದರೆ ಭಾರತಕ್ಕೆ ಮತ್ತಷ್ಟು ಕಠಿಣ ಸವಾಲುವೊಡ್ಡಲಿದ್ದರು ಎಂದು ಅಂದಾಜಿಸಲಾಗಿತ್ತು. ಸಾಯಿ ಸುದರ್ಶನ್ ಹಿಡಿದ ಈ ಕ್ಯಾಚ್ ಸರಣಿಯ ಬೆಸ್ಟ್ ಕ್ಯಾಚ್ ಆಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಕೂಡ ಆಗಿದೆ.