ಕರ್ನಾಟಕ

karnataka

ETV Bharat / sports

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್​ ಬಾರಿಸುತ್ತಿರುವ 22 ಅಡಿ ಉದ್ದದ ಸಚಿನ್​ ಪ್ರತಿಮೆ ನಿರ್ಮಾಣ.. ನಾಳೆ ಅನಾವರಣ - Sachin statue at Wankhede Stadium

ಸಚಿನ್​ ತೆಂಡೂಲ್ಕರ್​ ಅವರ 22 ಅಡಿ ಉದ್ದದ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆ ಅನಾವರಣಗೊಳ್ಳಲಿದೆ.

ಸಚಿನ್​ ಪ್ರತಿಮೆ
ಸಚಿನ್​ ಪ್ರತಿಮೆ

By ETV Bharat Karnataka Team

Published : Oct 31, 2023, 1:03 PM IST

ಮುಂಬೈ (ಮಹಾರಾಷ್ಟ್ರ):ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಹೆಸರಿಗೆ ಅದೆಷ್ಟೋ ದಾಖಲೆಗಳಿವೆ. ಅವರಾಡಿದ ಪ್ರತಿ ಮೈದಾನಗಳೂ ದಾಖಲೆಗಳ ಗೂಡೇ. ಸಚಿನ್​ ಇಷ್ಟಪಡುವ ಮತ್ತು ತವರು ಮೈದಾನವಾದ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ 'ತದ್ರೂಪಿ ಲಿಟಲ್​ ಮಾಸ್ಟರ್'​ ಮೈದಾಳಿದ್ದು, ಬುಧವಾರ (ನವೆಂಬರ್​ 1) ಅದು ಅನಾವರಣಗೊಳ್ಳಲಿದೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ​ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಅನಾವರಣ ಮಾಡಲಾಗುತ್ತಿದೆ. 'ಭಾರತ ರತ್ನ' ಸಚಿನ್ ತೆಂಡೂಲ್ಕರ್ ಅವರು ಅನಾವರಣ ಕಾರ್ಯಕ್ರಮಕ್ಕೆ ಸ್ವತಃ ಹಾಜರಿರಲಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಆಶಿಶ್ ಶೇಲಾರ್ ಉಪಸ್ಥಿತರಿರಲಿದ್ದಾರೆ. ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರ ಕಲ್ಪನೆಯಲ್ಲಿ ಸಚಿನ್ ಪ್ರತಿಮೆ ನಿರ್ಮಿಸಲಾಗಿದೆ. ಶ್ರೇಷ್ಠ ಕ್ರಿಕೆಟಿಗರೊಬ್ಬರಿಗೆ ಗೌರವ ಸೂಚಿಸಲು ಎಂಸಿಎ ಈ ನಿರ್ಧಾರ ಮಾಡಿದೆ.

ಪ್ರತಿಮೆಯ ವಿಶೇಷ:ಪ್ರತಿಮೆಯು ಆಸ್ಟ್ರೇಲಿಯಾ ಕ್ರಿಕೆಟ್​ ದಂತಕಥೆ, ದಿವಂಗತ ಶೇನ್ ವಾರ್ನ್ ಅವರ ಎಸೆತವನ್ನು ಸಿಕ್ಸರ್​ ಬಾರಿಸುತ್ತಿರುವ ಮಾದರಿಯಲ್ಲಿ ತೆಂಡೂಲ್ಕರ್ ಅವನ್ನು ತೋರಿಸಲಾಗಿದೆ. ಪ್ರತಿಮೆ 22 ಅಡಿ ಉದ್ದವಿದ್ದು, ಹೆಸರಾಂತ ಚಿತ್ರಕಲಾವಿದ, ಶಿಲ್ಪಿ ಪ್ರಮೋದ್ ಕಾಳೆ ಅವರು ನಿರ್ಮಿಸಿದ್ದಾರೆ. ಬುಧವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸಚಿನ್ ಪ್ರತಿಯೊಬ್ಬ ಉದಯೋನ್ಮುಖ ಕ್ರಿಕೆಟಿಗನಿಗೆ ಸ್ಫೂರ್ತಿ. ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಮತ್ತು ಇಡೀ ಪ್ರಪಂಚದ ಅಭಿಮಾನಿಗಳಿಗೆ ಸಂದೇಶ ರವಾನಿಸಲು ಬಯಸಿದ್ದೆವು. ಅದರಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದು ಭವಿಷ್ಯದ ಕ್ರಿಕೆಟ್ ಪೀಳಿಗೆಯನ್ನು ಪ್ರೇರೇಪಿಸುತ್ತದೆ. ಮುಂದೆ ಇದು ಸಚಿನ್ ಮತ್ತು ಮುಂಬೈ ಕ್ರಿಕೆಟ್‌ನ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಕಾರ್ಯದರ್ಶಿ ಅಜಿಂಕ್ಯಾ ನಾಯಕ್ ಹೇಳಿದರು.

ವಾಂಖೆಡೆಯಲ್ಲಿ ಕೊನೆ ಟೆಸ್ಟ್​:ಕ್ರಿಕೆಟ್​ನಲ್ಲಿ ದಾಖಲೆಗಳ ದಾಖಲೆಯನ್ನೇ ಸೃಷ್ಟಿಸಿದ್ದ ಸಚಿನ್​, ತಮ್ಮ ವೃತ್ತಿಜೀವನದ 200ನೇ ಮತ್ತು ಕೊನೆ ಟೆಸ್ಟ್​ ಅನ್ನು ವಾಂಖೆಡೆ ಕ್ರೀಡಾಂಗಣದಲ್ಲಿ 2013 ರಲ್ಲಿ ಆಡಿದ್ದರು. ಈಗಾಗಲೇ ಸ್ಟೇಡಿಯಂನ ಸ್ಟ್ಯಾಂಡ್​ವೊಂದಕ್ಕೆ ಸಚಿನ್​ ಹೆಸರಿದೆ. ಏಕದಿನ ಮಾದರಿಯಲ್ಲಿ 18,426 ರನ್‌, ಟೆಸ್ಟ್ ಕ್ರಿಕೆಟ್​ನಲ್ಲಿ 15,821 ರನ್‌ಗಳ ಶಿಖರ ಕಟ್ಟಿರುವ ಸಚಿನ್​ ಈಗಲೂ ಸಾರ್ವಕಾಲಿಕ ಅತಿ ಹೆಚ್ಚು ರನ್​ ಗಳಿಸಿದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಜನ್ಮದಿನದಂದು ಈಡನ್​ಗಾರ್ಡನ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ; ವಿಶೇಷ ಸಿದ್ಧತೆ

ABOUT THE AUTHOR

...view details