ಮುಂಬೈ (ಮಹಾರಾಷ್ಟ್ರ):ನನ್ನ ತವರು ಮೈದಾನದಲ್ಲಿ ಬಂದ ಈ ಪ್ರದರ್ಶನ ನನಗೆ ಕೇಕ್ ಮೇಲೆ ಐಸ್ಕ್ರೀಮ್ ಹಾಕಿ ಕೊಟ್ಟಷ್ಟು ಸಂತಸ ತಂದಿದೆ ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯ ಶತಕದ ಬಗ್ಗೆ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದಾರೆ.
2023ರ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಕಾದಾಡುತ್ತಿವೆ. ನಡೆಯುತ್ತಿರುವ ವಿಶ್ವಕಪ್ನ ರಾಯಭಾರಿ ಆಗಿರುವ ಸಚಿನ್ ತಮ್ಮ ತವರು ಮೈದಾನದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆ ಮುರಿದಿದ್ದಾರೆ. ಇದನ್ನು ಸ್ವತಃ ಸಚಿನ್ ಕಣ್ತುಂಬಿಕೊಂಡಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿಯ ಆಟಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ನ 50ನೇ ಶತಕವನ್ನು ದಾಖಲಿಸಿದರು. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕ ಗಳಿಸಿದ ಮೈಲಿಗಲ್ಲು ಸ್ಥಾಪಿಸಿದ್ದರು. ಇದನ್ನು ವಿರಾಟ್ ದಾಟಿದ್ದಾರೆ. ಅಲ್ಲದೇ ಒಂದು ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಮೈಲಿಗಲ್ಲನ್ನು ಸಚಿನ್ ಮಾಡಿದ್ದರು. 2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿದ್ದ 673 ರನ್ ಗಳಿಸಿದ್ದು ಅತಿ ಹೆಚ್ಚಿನ ರನ್ ಆಗಿತ್ತು. ಪ್ರಸ್ತುತ ವಿರಾಟ್ ಇದನ್ನು ದಾಟಿದ್ದಲ್ಲದೇ 711* ರನ್ ಗಳಿಸಿದ್ದಾರೆ. ವಿಶ್ವಕಪ್ನಲ್ಲಿ ಭಾರತಕ್ಕೆ ಇನ್ನೂ ಒಂದು ಪಂದ್ಯ ಆಡುವ ಅವಕಾಶ ಇದ್ದು, ವಿರಾಟ್ ಈ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಇದೆ.