ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ತೀವ್ರ ಕುತೂಹಲ ಮೂಡಿಸಿದೆ. ಅರ್ಹತಾ ಪಂದ್ಯಗಳು ಜಾರಿಯಲ್ಲಿದ್ದು, ಗೆದ್ದ ಟಾಪ್ 4 ತಂಡಗಳು ಸೂಪರ್ 12 ಗೆ ಎಂಟ್ರಿ ನೀಡಲಿವೆ. ಅಲ್ಲದೇ, ಭಾರತ ಇದೇ 23 ರಿಂದ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ.
ಈ ಮಧ್ಯೆ ವಿಶ್ವಕಪ್ ವಶಕ್ಕಾಗಿ ಘಟಾನುಘಟಿ ತಂಡಗಳು ಕಣಕ್ಕಿಳಿದಿದ್ದು, ಯಾವ ತಂಡ ಚಾಂಪಿಯನ್ ಆಗಲಿದೆ ಎಂಬ ಚರ್ಚೆ ಜೋರಾಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾಂಪಿಯನ್ ಪಟ್ಟಕ್ಕೆ ಬರುವ ಅಗ್ರ ನಾಲ್ಕು ತಂಡಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಭಾರತದ ಜೊತೆಗೆ ಪಾಕಿಸ್ತಾನ ತಂಡ ಕೂಡ ಇದೆ. ಇದಲ್ಲದೇ, ಡಾರ್ಕ್ಹಾರ್ಸ್ ತಂಡಗಳನ್ನೂ ಅವರು ಹೆಸರಿಸಿದ್ದಾರೆ.
ಕ್ರಿಕೆಟ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, ಭಾರತ ಈ ಬಾರಿ ಚಾಂಪಿಯನ್ ಆಗಬೇಕು ಎಂದು ನಾನು ಬಯಸುತ್ತೇನೆ. ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಭಾರತಕ್ಕೆ ಸವಾಲಾಗಲಿವೆ. ಫೈನಲ್ ಸೆಣಸಾಟದಲ್ಲಿ ಈ ನಾಲ್ಕು ತಂಡಗಳು ಇರಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಡಾರ್ಕ್ಹಾರ್ಸ್ ತಂಡಗಳಾದ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಈ ಬಾರಿ ಫೈನಲ್ಗೆ ಬರುವುದು ಕಷ್ಟ. ದಕ್ಷಿಣ ಆಫ್ರಿಕನ್ನರು ಉಳಿದ ತಂಡಗಳ ಪೈಪೋಟಿ ಮೀರಲಾರರು. ನ್ಯೂಜಿಲ್ಯಾಂಡ್ ಕೂಡ ಇದರಿಂದ ಭಿನ್ನವಾಗಿಲ್ಲ ಎಂದಿದ್ದಾರೆ.