ಕರ್ನಾಟಕ

karnataka

ETV Bharat / sports

ವಾಂಖೆಡೆ ಮೈದಾನದಲ್ಲಿ ಸಚಿನ್​ ಪ್ರತಿಮೆ ನಿರ್ಮಾಣ: ನವೆಂಬರ್​ 1ರಂದು ಅನಾವರಣ - ಮುಂಬೈ ಕ್ರಿಕೆಟ್ ಸಂಸ್ಥೆ

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾ-ಭಾರತ ಪಂದ್ಯಕ್ಕೂ ಮುನ್ನಾದಿನ ಸಚಿನ್​ ತೆಂಡೂಲ್ಕರ್​ ಅವರ ಪ್ರತಿಮೆ ಅನಾವರಣಗೊಳಿಸಲು ನಿರ್ಧರಿಸಲಾಗಿದೆ.

SACHIN TENDULKAR
SACHIN TENDULKAR

By ETV Bharat Karnataka Team

Published : Oct 20, 2023, 7:43 PM IST

ಮುಂಬೈ (ಮಹಾರಾಷ್ಟ್ರ): ಸಚಿನ್​ ತೆಂಡೂಲ್ಕರ್​ ಅವರನ್ನು ಕ್ರಿಕೆಟ್ ದೇವರೆಂದೇ ಕರೆಯಲಾಗುತ್ತದೆ. ಶತಕಗಳ ಶತಕ ಸಿಡಿಸಿದ ಏಕೈಕ ಬ್ಯಾಟರ್ ಸಚಿನ್​ಗೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌​ ಸಂದರ್ಭದಲ್ಲಿ ವಿಶೇಷ ಗೌರವ ಸಲ್ಲಿಸಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಿದ್ಧತೆ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯದ (ನ.2) ಒಂದು ದಿನ ಮುನ್ನ ಈ ಗೌರವವನ್ನು ನೀಡಲಾಗುತ್ತಿದೆ.

ವಾಂಖೆಡೆ ಸ್ಟೇಡಿಯಂನ ಒಂದು ಸ್ಟಾಂಡ್‌ಗೆ ಈಗಾಗಲೇ ಸಚಿನ್ ಅವರ​ ಹೆಸರನ್ನಿಡಲಾಗಿದೆ. ಇದೀಗ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸಚಿನ್ ಸಾಧನೆಗೆ ಜೀವಮಾನದ ಪ್ರತಿಮೆ ನಿರ್ಮಿಸಿದೆ. ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸ್ವೀಕರಿಸಿರುವ ಸಚಿನ್ ಅವರ​ ಪ್ರತಿಮೆಯನ್ನು ನವೆಂಬರ್ 1ರಂದು ಅನಾವರಣ ಮಾಡಲಾಗುತ್ತದೆ.

ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಶುಕ್ರವಾರ ಈಟಿವಿ ಭಾರತಕ್ಕೆ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ತೆಂಡೂಲ್ಕರ್ ಅವರೇ ಉಪಸ್ಥಿತರಿರಲಿದ್ದಾರೆ. ಇತರ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 28ರಂದು ತೆಂಡೂಲ್ಕರ್​ ಪ್ರತಿಮೆ ನಿರ್ಮಾಣದ ಬಗ್ಗೆ ಎಂಸಿಎ ಪ್ರಕಟಿಸಿತ್ತು. "2023ರ ಐಸಿಸಿ ವಿಶ್ವಕಪ್ ವೇಳೆ ಈ ಪ್ರತಿಮೆ ಅನಾವರಣ ಮಾಡಲಾಗುವುದು. ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಹೊರಗಿರುವ ಜಾಗದಲ್ಲಿ ಅಭಿಮಾನಿಗಳಿಗೆ ವೀಕ್ಷಣೆಗೆ ಸಿಗುವಂತೆ ಪ್ರತಿಮೆ ನಿರ್ಮಿಸಲಾಗುವುದು" ಎಂದು ಅಮೋಲ್ ಕಾಳೆ ತಿಳಿಸಿದ್ದರು.

ಅಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿನ್​, ನನ್ನ ವೃತ್ತಿಜೀವನ ಈ ಮೈದಾನದಿಂದ ಪ್ರಾರಂಭವಾಗಿತ್ತು. 2011ರಲ್ಲಿ ನಾವು ವಿಶ್ವಕಪ್​ ಗೆದ್ದಿರುವುದು ಸ್ಮರಣೀಯ ಕ್ಷಣ. ನಾನು ಕೊನೆಯ ಪಂದ್ಯವನ್ನು 2013ರಲ್ಲಿ ಇಲ್ಲಿಯೇ ಆಡಿದ್ದೆ. ಹೆಚ್ಚಿನ ನನ್ನ ನೆನಪುಗಳು ಈ ಕ್ರೀಡಾಂಗಣದಲ್ಲಿವೆ" ಎಂದಿದ್ದರು.

ಸಚಿನ್ ತೆಂಡೂಲ್ಕರ್ ಮುಂಬೈ ಮೂಲದವರು. ಬಾಂದ್ರಾದ ಸಾಹಿತ್ಯ ಸಹವಾಸ್‌ನಲ್ಲಿ ಬೆಳೆದವರು. ಮಧ್ಯ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿದ್ದ ದಿವಂಗತ ರಮಾಕಾಂತ್ ಅಚ್ರೇಕರ್ ಅವರಿಂದ ಕ್ರಿಕೆಟ್​ ಕಲಿತರು. 16ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದು, ಮೂರು ಮಾದರಿಯ ಕ್ರಿಕೆಟ್​ನಲ್ಲಿ 34,357 ರನ್​ ಕಲೆಹಾಕಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಬ್ಬ ಆಟಗಾರ ಗಳಿಸಿದ ಅತಿ ಹೆಚ್ಚಿನ ರನ್ ದಾಖಲೆಯಾಗಿದೆ.

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​​: ವಾರ್ನರ್ 163, ಮಾರ್ಷ್ 121 ರನ್! ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ದಾಖಲೆಯ ಜತೆಯಾಟ

ABOUT THE AUTHOR

...view details