ಕಾನ್ಪುರ (ಉತ್ತರ ಪ್ರದೇಶ):ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2022ಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 10ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂಡಿಯಾ ಲೆಜೆಂಡ್ಸ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್ ನಡುವಿನ ಪಂದ್ಯದೊಂದಿಗೆ ಈ ಸರಣಿ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕಾಗಿ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣ ಸಜ್ಜಾಗಿದೆ.
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನಲ್ಲಿ ಈ ಬಾರಿ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶದ ದಿಗ್ಗಜ ಕ್ರಿಕೆಟಿಗರು ಭಾಗವಹಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಇಯಾನ್ ಬೆಲ್, ರಾಸ್ ಟೇಲರ್, ಶೇನ್ ವ್ಯಾಟ್ಸನ್, ಬ್ರೆಟ್ ಲೀ, ಜಾಂಟಿ ರೋಡ್ಸ್, ಟಿಎಂ ದಿಲ್ಶನ್ ಸೇರಿದಂತೆ ಹಲವು ಖ್ಯಾತ ಆಟಗಾರರನ್ನು ಅಭಿಮಾನಿಗಳು ಮತ್ತೆ ಮೈದಾನದಲ್ಲಿ ನೋಡಬಹುದು.
ಈ ಟೂರ್ನಿಯ ಮೊದಲ ಏಳು ಪಂದ್ಯಗಳು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ನಿಟ್ಟಿನಲ್ಲಿ ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಹಾಗೂ ಸಂಘಟಕರು ಮತ್ತು ಇತರ ಆಡಳಿತಾಧಿಕಾರಿಗಳು ಬುಧವಾರ ಕ್ರೀಡಾಂಗಣದಲ್ಲಿ ಭದ್ರತಾ ಪರಿಶೀಲನೆ ನಡೆಸಿದರು.
ಈ ವೇಳೆ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಸ್ಟೇಡಿಯಂನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಪಂದ್ಯಗಳ ಸಮಯದಲ್ಲಿ ಆಟಗಾರರು ಸುರಕ್ಷತೆ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧೀನ ಅಧಿಕಾರಿಗಳಿಗೆ ಮಾರ್ಗದ ವ್ಯವಸ್ಥೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.