ಕೇಪ್‌ಟೌನ್ :ಕೋವಿಡ್-19 ಭೀತಿಯಲ್ಲೂ ಪ್ರವಾಸ ಕೈಗೊಂಡು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಟೀಂ ಇಂಡಿಯಾ ಆಟಗಾರರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಾರ್ಯಾಚರಣೆ ನಿರ್ದೇಶಕ ಗ್ರೇಮ್ ಸ್ಮಿತ್ ಧನ್ಯವಾದ ಅರ್ಪಿಸಿದ್ದಾರೆ.
ಭಾರತ ತಂಡ ಈ ಪ್ರವಾಸವನ್ನು ಮೊದಲ ಟೆಸ್ಟ್ ಗೆಲ್ಲುವ ಮೂಲಕ ಉತ್ತಮವಾಗಿ ಆರಂಭಿಸಿತ್ತು. ಆದರೆ, ನಂತರ ಸತತ ಎರಡು ಟೆಸ್ಟ್ ಸೋತು 1-2ರಲ್ಲಿ ಸರಣಿ ಕಳೆದುಕೊಂಡರೆ, ಏಕದಿನ ಸರಣಿಯನ್ನು 0-3ರಲ್ಲಿ ಹೀನಾಯವಾಗಿ ಸೋಲು ಕಂಡಿತು. ವಿವಾದ, ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಈ ಪ್ರವಾಸದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ನೆರವಾಗಿದೆ.
"ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮೇಲೆ ನಂಬಿಕೆಯಿಟ್ಟು ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ ಬಿಸಿಸಿಐ, ಜಯ್ ಶಾ, ಗಂಗೂಲಿ ಮತ್ತು ಭಾರತದ ಎಲ್ಲಾ ಆಟಗಾರರಿಗೆ ದೊಡ್ಡ ಧನ್ಯವಾದಗಳು. ಈ ಅನಿಶ್ಚಿತ ಸಮಯದಲ್ಲಿ ನಿಮ್ಮ ಬದ್ಧತೆಯು ಬಹಳಷ್ಟು ಮಂದಿಗೆ ಒಳ್ಳೆಯ ಉದಾಹರಣೆಯಾಗಿದೆ" ಎಂದು ಸ್ಮಿತ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.