ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ):ಟೀಂ ಇಂಡಿಯಾ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನ ಹೊರತಾಗಿ ಕೂಡ ಭಾರತ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 202ರನ್ಗಳಿಗೆ ಆಲೌಟ್ ಆಗಿದೆ. ಇದೀಗ ಬ್ಯಾಟಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 1ವಿಕೆಟ್ನಷ್ಟಕ್ಕೆ 35 ರನ್ಗಳಿಕೆ ಮಾಡಿದ್ದು, 167 ರನ್ಗಳ ಹಿನ್ನಡೆಯಲ್ಲಿದೆ.
ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ರಾಹುಲ್ ಹಾಗೂ ಮಯಾಂಕ್ ಅಗರವಾಲ್(26) ರನ್ಗಳ ನೆರವಿನಿಂದ ಮೊದಲ ವಿಕೆಟ್ನಷ್ಟಕ್ಕೆ 36ರನ್ ಪೇರಿಸಿದರು. ಈ ವೇಳೆ ಮಯಾಂಕ್ ವಿಕೆಟ್ ಪತನವಾಯಿತು.
ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ
ಮಯಾಂಕ್ ಬೆನ್ನಲ್ಲೇ ಬಂದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರಾ 3ರನ್, ರಹಾನೆ ಸೊನ್ನೆ ಸುತ್ತಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬಂದ ಹನುಮ ವಿಹಾರಿ 20 ರನ್ ಹಾಗೂ ರಿಷಭ್ ಪಂತ್ 17ರನ್ಗಳಿಸಿ ವಿಕೆಟ್ ಒಪ್ಪಿಸಿದರು.