ಕೇಪ್ಟೌನ್ :ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಲ್ಲಿ ನಡೆದ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಾದ ಅಚಾತುರ್ಯ ಘಟನೆ ಬಗ್ಗೆ ನಾಯಕ ಡೀನ್ ಎಲ್ಗರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ನನ್ನ ಸಾಮರ್ಥ್ಯವನ್ನು ಸಾಬೀತು ಮಾಡಲು ಮತ್ತು ತಂಡವನ್ನು ಗೆಲುವಿನತ್ತ ಕರೆದೊಯ್ಯಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿತು. ಇದು ಅವರನ್ನು ಅವರೇ ಗೊತ್ತಿಲ್ಲದಂತೆ ಕಟ್ಟಿ ಹಾಕಿಕೊಳ್ಳಲು ಮಾಡಿದ ಎಡವಟ್ಟು ಎಂದಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿದ್ದರಿಂದ ನಾಯಕ ಡೀನ್ ಎಲ್ಗರ್ ನಿರ್ಗಮನದ ಬಗ್ಗೆ ಗೊಂದಲ ಮೂಡಿತ್ತು. ಸಹ ಆಟಗಾರನ ಜೊತೆ ಚರ್ಚೆ ಮಾಡಿದ ಬಳಿಕ ನಿಖರತೆಗಾಗಿ ಎಲ್ಗರ್ ಡಿಸಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ಮೊರೆ ಹೋಗಬೇಕಾಯಿತು.
ಹಲವು ಚರ್ಚೆ ಹಾಗೂ ರಿವ್ಯೂ ಬಳಿಕ ಥರ್ಡ್ ಅಂಪೈರ್ ನಾಟೌಟ್ ಎಂದು ಘೋಷಿಸಿದ್ದರು. ಎಲ್ಗರ್ ಅವರನ್ನು ಔಟ್ ಮಾಡಿದ್ದೇವೆಂಬ ಖುಷಿಯಲಿದ್ದ ಟೀಂ ಇಂಡಿಯಾ ಆಟಗಾರರಿಗೆ ಇದು ಭಾರಿ ನಿರಾಶೆಗೆ ದಾರಿ ಮಾಡಿಕೊಟ್ಟಿತು.
ಅಸಮಾಧಾನ ಹೊರ ಹಾಕುವ ತವಕದಲ್ಲಿ ಟೀಂ ಇಂಡಿಯಾದ ಆಟಗಾರರು ತಮ್ಮ ಆಟವನ್ನು ಮುಂದುವರೆಸುವಲ್ಲಿ ಸ್ವಲ್ಪ ಕಾಲ ತೆಗೆದುಕೊಂಡರು. ಇದೇ ನನಗೆ ವರದಾನವಾಯಿತು ಎಂದು ನಾಯಕ ಡೀನ್ ತಾವು ಆ ಕ್ಷಣದ ಒತ್ತಡದಿಂದ ಹೇಗೆ ಸುಧಾರಿಸಿಕೊಂಡೆ ಅನ್ನೋದನ್ನು ವರ್ಚುವೆಲ್ ಕಾನ್ಫರೆನ್ಸ್ನಲ್ಲಿ ಹೇಳಿಕೊಂಡಿದ್ದಾರೆ.
ಅವರ ಅಸಮಾಧಾನವು ಒತ್ತಡದಲ್ಲಿದ್ದ ನನ್ನನ್ನು ಹೊರತಂದಿತು. ಡಿಆರ್‌ಎಸ್ ಕರೆಯಿಂದ ಎದುರಾಳಿ ತಂಡ ತೋರಿದ ನಿರಾಶೆ ಮತ್ತು ತೆಗೆದುಕೊಂಡ ಮಾರ್ಗ ನನ್ನ ತಂಡಕ್ಕೆ ಉತ್ತಮ ಕೆಲಸ ಮಾಡಿಕೊಟ್ಟಿತು ಎಂದು ರೋಚಕ ಹಂತ ತಲುಪಿದ್ದ ಪಂದ್ಯ ತಮ್ಮತ್ತ ಒಲಿದ ಪ್ರಸಂಗದ ಬಗ್ಗೆಯೂ ಹೇಳಿದ್ದಾರೆ.
ನಡೆದಿದ್ದೇನು?
ಅಂತಿಮ ಟೆಸ್ಟ್ ಪಂದ್ಯ ಕುತೂಹಲದ ಘಟ್ಟಕ್ಕೆ ಬಂದು ತಲುಪಿತ್ತು. ಟೀಂ ಇಂಡಿಯಾದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ತಮ್ಮ ಬೌಲಿಂಗ್‌ನಲ್ಲಿ ಎದುರಾಳಿ ತಂಡದ ನಾಯಕ ಡೀನ್ ಎಲ್ಗರ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದರು. ಆನ್‌ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಕೂಡ ಔಟ್ ನೀಡಿದರು.
ಆದರೆ, ತಮ್ಮ ನಿರ್ಗಮನದ ಬಗ್ಗೆ ಸಂಶಯ ಮೂಡಿದ್ದರಿಂದ ಸಹ ಬ್ಯಾಟರ್ ಕೀಗನ್ ಪೀಟರ್ಸನ್ ಜತೆ ಸಮಾಲೋಚಿಸಿ ಡಿಆರ್‌ಎಸ್ ಮೊರೆ ಹೋಗಲು ನಿರ್ಧರಿಸಿದರು. ಡಿಆರ್‌ಎಸ್ ರಿವೀವ್‌ನಲ್ಲಿ ಮೊದಲು ಚೆಂಡು ಮೊಣಕಾಲಿಗೆ ಬಿದ್ದಿದ್ದೇನೋ ತೋರಿಸಿತು. ಆದರೆ, ವಿಕೆಟ್‌ನಿಂದ ಮೇಲ್ಭಾಗದಲ್ಲಿ ಸಾಗುತ್ತಿರುವುದನ್ನ ಆ ಬಳಿಕ ತೋರಿಸುವ ಮೂಲಕ ಭಾರತ ತಂಡದ ಆಟಗಾರರಿಗೆ ಶಾಕ್ ನೀಡಿತು.
ಡಿಆರ್‌ಎಸ್ ತೀರ್ಪಿನಿಂದ ರೊಚ್ಚಿಗೆದ್ದ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಟಗಾರರು ಡಿಆರ್‌ಎಸ್ ವಿರುದ್ಧ ಕಿಡಿ ಕಾರಿದರು. ಒಂದು ಹೆಜ್ಜೆ ಮುಂದೆ ಹೋದ ಕೊಹ್ಲಿ ಸ್ಟಂಪ್ ಮೈಕ್ ಬಳಿ ತೆರಳಿ ತಮ್ಮ ಅಸಮಾಧಾನ ಹೊರ ಹಾಕಿದರು.
ಪಂದ್ಯ ಪ್ರಸಾರಕರು ಸಹ ಇದರ ಕಡೆಗೂ ಹೆಚ್ಚು ಗಮನಹರಿಸಬೇಕಾಯಿತು. ಹಲವು ನಾಟಕೀಯ ಬೆಳವಣಿಗೆ ಡೀನ್ ಎಲ್ಗರ್ ಅವರಿಗೆ ಲಾಭ ತಂದುಕೊಟ್ಟಿತು.
ಸಿಕ್ಕ ಅವಕಾಶವನ್ನು ಉಪಯೋಗ ಮಾಡಿಕೊಂಡ ಎಲ್ಗರ್, ಎರಡನೇ ವಿಕೆಟ್ಗೆ ಕೀಗನ್ ಪೀಟರ್ಸನ್ ಜತೆ ಸೇರಿ ಬರೋಬ್ಬರಿ 88 ರನ್‌ಗಳ ಅಮೂಲ್ಯ ಜೊತೆಯಾಟವನ್ನು ಕಟ್ಟಿದರು. ಇದು ತಂಡವನ್ನು ಗೆಲುವಿನ ಡದ ಸೇರಿಸಲು ಮಹತ್ತರ ಪಾತ್ರವಾಯಿತು.
ದಿನದ ಕೊನೆಯವರೆಗೂ ತಾಳ್ಮೆಯ ಆಟವಾಡಿದ ಎಲ್ಗರ್ 96 ಎಸೆತಗಳನ್ನ ಎದುರಿಸಿ 30 ರನ್‌ಗಳಿಸಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಕೀಪರ್ ರಿಷಭ್ ಪಂತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ನಡೆದರು.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2ನೇ ಆವೃತ್ತಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದ ಭಾರತ!