ರಾಜ್ಕೋಟ್: ಭಾರತದ ತಂಡದ ಬಾಗಿಲು ತಟ್ಟುತ್ತಿರುವ ಮಹಾರಾಷ್ಟ್ರದ ತಂಡದ ನಾಯಕ ಋತುರಾಜ್ ಗಾಯಕ್ವಾಡ್ 2021 ವಿಜಯ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಿಂದ ತಮ್ಮ 4ನೇ ಶತಕ ಸಿಡಿಸಿ ವಿಜೃಂಭಿಸಿದ್ದಾರೆ.
2021ರ ಐಪಿಎಲ್ನಲ್ಲಿ 16 ಪಂದ್ಯಗಳಿಂದ 635 ರನ್ಗಳಿಸಿ ಅತ್ಯಂತ ಕಿರಿಯ ಬ್ಯಾಟರ್ ಆಗಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು. ನಂತರ ಸೈಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಇನ್ನಿಂಗ್ಸ್ಗಳಲ್ಲಿ 259 ರನ್ಗಳಿಸಿ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದರು. ಇದೀಗ ವಿಜಯ ಹಜಾರೆ ಟ್ರೋಫಿಯಲ್ಲೂ 5 ಪಂದ್ಯಗಳಿಂದ 4 ಶತಕಗಳ ಸಹಿತ 603 ರನ್ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರು 2ನೇ ಸ್ಥಾನದಲ್ಲಿರುವ ಮನನ್ ವೊಹ್ರಾಗಿಂತ(379) ಬರೋಬ್ಬರಿ 224 ರನ್ ಅಂತರ ಕಾಯ್ದುಕೊಂಡಿದ್ದಾರೆ.
ಕೊಹ್ಲಿ ಪೃಥ್ವಿ, ಪಡಿಕ್ಕಲ್ ಸಾಲಿಗೆ ಸೇರಿದ ಗಾಯಕ್ವಾಡ್
ಋತುರಾಜ್ 2021ರ ವಿಜಯ ಹಜಾರೆ ಟ್ರೋಪಿಯಲ್ಲಿ ಹ್ಯಾಟ್ರಿಕ್ ಶತಕ ಸೇರಿದಂತೆ ಒಟ್ಟು ನಾಲ್ಕು ಶತಕ ಸಿಡಿಸಿದ್ದಾರೆ. ಅವರು ಚಂಡೀಗಢ ವಿರುದ್ದ 168(132 ಎಸೆತ), ಛತ್ತಿಸ್ಗಢ ವಿರುದ್ಧ 154(143), ಮಧ್ಯ ಪ್ರದೇಶ ವಿರುದ್ಧ 136(112) ಮತ್ತು ಕೇರಳ ವಿರುದ್ಧ 124(129) ರನ್ಗಳಿಸಿದ್ದರು. ಈ ಮೂಲಕ ಒಂದೇ ಆವೃತ್ತಿಯ ಹಜಾರೆ ಟ್ರೋಫಿಯಲ್ಲಿ ಹೆಚ್ಚು ಶತಕಗಳಿಸಿ 4ನೇ ಬ್ಯಾಟರ್ ಎನಿಸಿಕೊಂಡರು.