ಭಾರತ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಮೈದಾನ ಸಿಬ್ಬಂದಿಯನ್ನು ಅವಮಾನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ. ಅವರನ್ನು ಕ್ರಿಕೆಟ್ನಿಂದಲೇ ನಿಷೇಧಿಸುವಂತೆಯೂ ಒತ್ತಾಯಿಸಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದ ರದ್ದಾದ 5ನೇ ಟಿ-20 ಪಂದ್ಯ ಆರಂಭಕ್ಕೂ ಮುನ್ನ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಡಗ್ಔಟ್ನಲ್ಲಿ ಕುಳಿತಿದ್ದಾಗ ಅವರ ಬಳಿಗೆ ಬಂದ ಮೈದಾನದ ಸಿಬ್ಬಂದಿ ಗಾಯಕ್ವಾಡ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹತ್ತಿರ ಬಂದಾಗ ದೂರ ಸರಿಯುವಂತೆ ಸೂಚಿಸಿ ಅವಮಾನಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಗಾಯಕ್ವಾಡ್ರ ಈ ವರ್ತನೆಗೆ ಕಟು ಟೀಕೆ ವ್ಯಕ್ತವಾಗಿದೆ. ಮೈದಾನದ ಸಿಬ್ಬಂದಿ ಮಳೆಯ ಮಧ್ಯೆಯೂ ಕೆಲಸ ಮಾಡಿ ಆಟಕ್ಕೆ ಮೈದಾನ ಸಿದ್ಧಪಡಿಸಲು ಶ್ರಮಿಸಿದ್ದಾರೆ. ಅಂತಹ ವ್ಯಕ್ತಿ ಸೆಲ್ಫಿ ಕೇಳಲು ಬಂದಾಗ ನಿರಾಕರಿಸಿ, ದೂರ ದೂಡಿ ಅವಮಾನಿಸಿದ್ದಕ್ಕೆ ಆಟಗಾರನ ವಿರುದ್ಧ ನೆಟಿಜನ್ಸ್ ಟೀಕಾಪ್ರಹಾರ ನಡೆಸಿದ್ದಾರೆ.
'ಗ್ರೌಂಡ್ಸ್‌ಮನ್‌ಗಳು ಮಳೆಯಲ್ಲಿಯೇ ಕೆಲಸ ಮಾಡಿ ಮೈದಾನ ಸಿದ್ಧಪಡಿಸಿದರೆ, ಗಾಯಕ್ವಾಡ್ ಅಂತಹ ಶ್ರಮಜೀವಿಯನ್ನೇ ಮುಟ್ಟದಂತೆ ದೂರ ದೂಡಿದ್ದು ಸರಿಯಲ್ಲ. ಈತನನ್ನು ಕ್ರಿಕೆಟ್ನಿಂದಲೇ ನಿಷೇಧಿಸಿ' ಎಂದು ಟ್ವಿಟ್ಟರ್ ಬಳಕೆದಾರ ಅವನೀತ್ ಎಂಬುವವರು ಆಗ್ರಹಿಸಿದ್ದಾರೆ.