ಅಹಮದಾಬಾದ್ (ಗುಜರಾತ್):ಓವರ್ನ 6 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ಯುವರಾಜ್ ಸಿಂಗ್, ಕ್ರಿಸ್ಗೇಲ್ರಂತಹ ದೈತ್ಯ ಬ್ಯಾಟರ್ಗಳು ವಿಶ್ವದಾಖಲೆ ಮಾಡಿದ್ದಾರೆ. ಇದನ್ನು ಮೀರಿಸಿರುವ ಭಾರತದ ದಾಂಡಿಗ ಋತುರಾಜ್ ಗಾಯಕ್ವಾಡ್ ನೋಬಾಲ್ ಸೇರಿದಂತೆ ಒಂದೇ ಓವರ್ನಲ್ಲಿ 7 ಸಿಕ್ಸರ್ ಬಾರಿಸಿ ಹೊಸ ದಾಖಲೆ ರಚಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.
ಸೋಮವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಉತ್ತರಪ್ರದೇಶ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಆಟಗಾರ ಗಾಯಕ್ವಾಡ್ ಈ ವಿನೂತನ ದಾಖಲೆ ಮಾಡಿದರು. ಉತ್ತರಪ್ರದೇಶದ ಶಿವ ಸಿಂಗ್ ಎಸೆದ ಪಂದ್ಯದ 49 ನೇ ಓವರ್ನಲ್ಲಿ ಅಬ್ಬರಿಸಿದ ಗಾಯಕ್ವಾಡ್ ಮೊದಲ 4 ಎಸೆತಗಳನ್ನು ಸತತವಾಗಿ ಸಿಕ್ಸರ್ಗಟ್ಟಿದರು.
ಇದರಿಂದ ವಿಚಲಿತನಾದ ಶಿವ ಸಿಂಗ್ ನೋಬಾಲ್ ಹಾಕಿದರು. ಇದನ್ನೂ ಬೌಂಡರಿ ಗೆರೆಯಾಚೆ ದಾಟಿಸಿದ್ದಲ್ಲದೇ, ಮುಂದಿನ 2 ಎಸೆತಗಳಲ್ಲೂ ಸಿಕ್ಸರ್ (6,6,6,6,nb6,6,6) ಬಾರಿಸುವ ಮೂಲಕ ಸತತ 7 ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ವಿಶ್ವದೆಲ್ಲಾ ದಾಖಲೆಗಳನ್ನು ಗಾಯಕ್ವಾಡ್ ಪುಡಿಗಟ್ಟಿದ್ದಾರೆ.