ನವದೆಹಲಿ: ನೆವೆಂಬರ್ 17ರಿಂದ ನ್ಯೂಜಿಲ್ಯಾಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಐಪಿಎಲ್ ಸ್ಟಾರ್ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಅಯ್ಯರ್ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ರುತುರಾಜ್ ಗಾಯಕ್ವಾಡ್ ಇತ್ತೀಚೆಗೆ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಪ್ರದರ್ಶನ ತೋರಿದ್ದರು. ಅವರು 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 136 ಸ್ಟ್ರೈಕ್ ರೇಟ್ ಮತ್ತು 45ರ ಸರಾಸರಿಯಲ್ಲಿ 635 ರನ್ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.
ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಈ ಸರಣಿ ಆರಂಭವಾಗಲಿದ್ದು, ಕೆಲವು ಹಿರಿಯ ಆಟಗಾರರು ವಿಶ್ರಾಂತಿ ಬಯಸಿರುವ ಕಾರಣ ದೇಶಿ ಟೂರ್ನಮೆಂಟ್ಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಗಾಯಕ್ವಾಡ್ ಸೇರಿದಂತೆ ಕೆಲವು ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.