ಮುಂಬೈ:ರಾಜಸ್ಥಾನ್ ರಾಯಲ್ಸ್ ತಮಗೆ ಚೊಚ್ಚಲ ಐಪಿಎಲ್ ಟ್ರೋಫಿ ತಂದುಕೊಟ್ಟಿದ್ದ ಇತ್ತೀಚಿಗೆ ನಿಧನರಾಗಿರುವ ಆಸೀಸ್ ದಂತಕತೆ ಶೇನ್ ವಾರ್ನ್ ಅವರ ಅಸಾಧಾರಣ ಜೀವನವನ್ನು ಸ್ಮರಿಸಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆಯುವ ಪಂದ್ಯದಲ್ಲಿ ಈ ಗೌರವ ಅರ್ಪಣೆ ಕಾರ್ಯಕ್ರಮ ಜರುಗಲಿದೆ.
ವಾರ್ನ್ ಉದ್ಘಾಟನಾ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡು ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿ ಟ್ರೋಫಿ ತಂದುಕೊಟ್ಟಿದ್ದರು. 14 ವರ್ಷಗಳ ಹಿಂದೆ ತಂಡದ ವಿಜಯೋತ್ಸವದ ಪ್ರಮುಖ ರೂವಾರಿಯಾಗಿದ್ದ ತನ್ನ ಮೊದಲ ನಾಯಕನಿಗೆ ಗೌರವ ಸಲ್ಲಿಸುವುದಾಗಿ ಮಾಜಿ ಫ್ರಾಂಚೈಸಿ ತಿಳಿಸಿದೆ. ವಾರ್ನ್ ಅವರ ಸಹೋದರ ಜೇಸನ್ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಾಗುವುದಕ್ಕೆ ಫ್ರಾಂಚೈಸಿಯ ಆಹ್ವಾನವನ್ನು ಸ್ವೀಕರಿಸಿರುವುದಾಗಿ ರಾಯಲ್ಸ್ ತಿಳಿಸಿದೆ.
ವಾರ್ನ್ ಅವರು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದ ಅದೇ ಕ್ರೀಡಾಂಗಣದಲ್ಲಿ ಇಡೀ ಕ್ರಿಕೆಟ್ ಜಗತ್ತು ಗೌರವವನ್ನು ಸಲ್ಲಿಸಲು ಮತ್ತು ಅವರ ಜೀವನವನ್ನು ಸ್ಮರಿಸಲು ಒಟ್ಟಾಗಿ ಸೇರುವುದನ್ನು ನೋಡುವುದಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.