ಪುಣೆ: ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ರಿಯಾನ್ ಪರಾಗ್(56) ಅವರು ಅರ್ಧಶತಕದ ಹೊರತಾಗಿಯೂ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 144 ರನ್ಗಳಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟಿದ್ದ ರಾಯಲ್ಸ್ ತಂಡ ಕೇವಲ 33 ರನ್ಗಳಾಗುವಷ್ಟರಲ್ಲೇ ಪ್ರಮುಖ ಮೂರು ಕಳೆದುಕೊಂಡಿತು. ದೇವದತ್ ಪಡಿಕ್ಕಲ್(7), ರವಿಚಂದ್ರನ್ ಅಶ್ವಿನ್(17) ಮತ್ತು ಕಳೆದ ಪಂದ್ಯದ ಶತಕ ವೀರ ಜಾಸ್ ಬಟ್ಲರ್(8) ಪವರ್ ಪ್ಲೇ ಮುಗಿಯುವುದರೊಳಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸಂಜು ಸಾಮ್ಸನ್ ಅಬ್ಬರದ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು, ಅವರು 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 27 ರನ್ಗಳಿಸಿ ಹಸರಂಗ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ವಿಫಲರಾಗಿ ಬೌಲ್ಡ್ ಆದರು. ಇವರ ಬೆನ್ನಲ್ಲೇ ಮೊದಲ ಪಂದ್ಯದಲ್ಲಿ ಅವಕಾಶ ಪಡೆದ ಡೇರಿಲ್ ಮಿಚೆಲ್ 24 ಎಸೆತಗಳ್ಲಿ ಒಂದೂ ಬೌಂಡರಿ ಬಾರಿಸದೆ ಕೇವಲ 16 ರನ್ಗಳಿಸಿ ಔಟಾದರು.
ನಂತರ ಬಂದಂತಹ ಬ್ಯಾಟರ್ಗಳಾದ ಹೆಟ್ಮಾಯರ್(3), ಟ್ರೆಂಟ್ ಬೌಲ್ಟ್(5) ಪ್ರಸಿಧ್ ಕೃಷ್ಣ(2) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡರು. ಆದರೆ ಆರ್ಸಿಬಿ ಬೆಂಕಿಯಂತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ 20 ವರ್ಷದ ರಿಯಾನ್ ಪರಾಗ್ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 56 ರನ್ಗಳಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.