ಪುಣೆ: ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿಂದ ಆರ್ಸಿಬಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 174 ರನ್ಗಳ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಮೊದಲ ವಿಕೆಟ್ಗೆ 62 ರನ್ಗಳ ಭರ್ಜರಿ ಆರಂಭ ಪಡೆದುಕೊಂಡಿತು. ಆದರೆ 17 ರನ್ಗಳ ಅಂತರದಲ್ಲಿ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 38 ರನ್ಗಳಿಸಿದ್ದ ಪ್ಲೆಸಿಸ್, 33 ಎಸೆತಗಳಲ್ಲಿ 30 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್(3) ವಿಕೆಟ್ ಕಳೆದುಕೊಂಡಿತು.
ದಿಢೀರ್ ಕುಸಿತದಿಂದ ಆಘಾತಕ್ಕೊಳಗಾಗಿದ್ದ ತಂಡವನ್ನು ಲೊಮ್ರೋರ್ ಮತ್ತು ರಜತ್ ಪಾಟೀದಾರ್ ಮೇಲೆತ್ತಿದರು. ಈ ಜೋಡಿ 4 ವಿಕೆಟ್ಗೆ 44 ರನ್ ಸೇರಿಸಿ ಚೇತರಿಕೆ ನೀಡಿತು. ಆದರೆ 21 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಾಟೀದಾರ್ರನ್ನು ಪ್ರೆಟೋರಿಯಸ್ ಪೆವಿಲಿಯನ್ಗಟ್ಟಿದರು.
ನಂತರ ಬಂದ ದಿನೇಶ್ ಕಾರ್ತಿಕ್, ಲೊಮ್ರೋರ್ ಜೊತಗೂಡಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಒಂದು ಹಂತದಲ್ಲಿ ಆರ್ಸಿಬಿ 180-190ರ ಹತ್ತಿರ ಬರಬಹುದು ಎಂದು ಊಹಿಸಲಾಗಿತ್ತು. ಆದರೆ 19ನೇ ಓವರ್ ಎಸೆದ ತೀಕ್ಷಣ ಕೇವಲ 2 ರನ್ ನೀಡಿ 27 ಎಸೆತಗಳಲ್ಲಿ 42 ರನ್ಗಳಿಸಿದ್ದ ಲೊಮ್ರೋರ್, ನಂತರದ ಎಸೆತದಲ್ಲೇ ವನಿಂಡು ಹಸರಂಗ ಮತ್ತು ಕೊನೆಯ ಎಸೆತದಲ್ಲಿ ಶಹಬಾಜ್ ವಿಕೆಟ್ ಪಡೆದು ಆರ್ಸಿಬಿ ಬೃಹತ್ ಮೊತ್ತದ ಕನಸಿಗೆ ತಣ್ಣೀರೆರಚಿದರು.
ಆದರೆ ಕೊನೆಯ ಓವರ್ನಲ್ಲಿ ದಿನೇಶ್ ಕಾರ್ತಿಕ್(26) 2 ಸಿಕ್ಸರ್ಗಳ ಸಹಿತ 16 ರನ್ ಸಿಡಿಸಿ 174 ರನ್ಗಳ ಸವಾಲಿನ ಗುರಿ ನೀಡಲು ನೆರವಾದರು.