ಕರ್ನಾಟಕ

karnataka

ETV Bharat / sports

ಮುಗಿಯದ ಆರ್‌ಸಿಬಿ ಗೋಳು, ಸತತ 5ನೇ ಸೋಲು: ಪ್ರಶಸ್ತಿ ರೇಸ್​ನಿಂದ ಬಹುತೇಕ ಔಟ್!​ - ಡೆಲ್ಲಿ ಕ್ಯಾಪಿಟಲ್ಸ್​ ಆರ್​ಸಿಬಿ ಪಂದ್ಯ

ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ತಂಡ ಸತತ ಐದನೇ ಸೋಲು ಕಾಣುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್​ 4 ಜಯ ಸಾಧಿಸಿ ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಆರ್​ಸಿಬಿಗೆ ಸತತ 5 ನೇ ಸೋಲು
ಆರ್​ಸಿಬಿಗೆ ಸತತ 5 ನೇ ಸೋಲು

By

Published : Mar 14, 2023, 7:31 AM IST

ನವಿಮುಂಬೈ:ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಹಿಡಿತ ಸಾಧಿಸದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಸತತ ಐದನೇ ಸೋಲುಂಡಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್​ ಕೊನೆಯಲ್ಲಿ ಓವರ್​​ನಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಜೆಸ್ ಜೊನಾಸೆನ್ (ಔಟಾಗದೆ 29) ಮತ್ತು ಮಾರಿಯಾನೆ ಕಾಪ್​ (ಅಜೇಯ 32) ಜೋಡಿ ಮತ್ತೊಮ್ಮೆ ಮೈದಾನದಲ್ಲಿ ತಮ್ಮ ಖದರ್​ ತೋರಿಸಿದರು. ಆಲ್​ರೌಂಡ್​ ಆಟದ ಮೂಲಕ ಗಮನ ಸೆಳೆಯುತ್ತಿರುವ ಕಾಪ್​ ಬಿಗಿ ಬೌಲಿಂಗ್​ ಬಳಿಕ, ಬ್ಯಾಟಿಂಗ್​ನಲ್ಲೂ ಮಿಂಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟ್​ ಮಾಡಿ ಆರ್​ಸಿಬಿ ನೀಡಿದ 151 ರನ್​ಗಳ ಸವಾಲಿನ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್​ ಚೇಸ್​ ಮಾಡಿತು. ಆರಂಭದಲ್ಲೇ ಶೆಫಾಲಿ ವರ್ಮಾ (0) ವಿಕೆಟ್​ ವಿಕೆಟ್​ ಕಿತ್ತ ಮೆಗನ್​ ಸ್ಕಟ್​ ಡೆಲ್ಲಿಗೆ ಶಾಕ್​ ನೀಡಿದರು. ಇದರ ಬಳಿಕ ನಾಯಕಿ ಮೆಗ್​ ಲ್ಯಾನಿಂಗ್​ ಕೂಡ 15 ರನ್​ಗೆ ಔಟಾದರು. ಇದರ ಬಳಿಕ ಆಲೀಸ್​ ಕ್ಯಾಪ್ಸಿ 38 ರನ್​ ಚಚ್ಚಿದರು. ಇವರ ಇನಿಂಗ್ಸ್​ನಲ್ಲಿ 8 ಬೌಂಡರಿಗಳಿದ್ದವು. ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೋಡ್ರಿಗಸ್​ 32 ರನ್​ ಮಾಡಿದರು.

ಇಬ್ಬರೂ ಔಟಾದ ಬಳಿಕ ಗೆಲುವಿನ ಹೊಣೆ ಹೊತ್ತ ಆಲ್​ರೌಂಡರ್​ಗಳಾದ ಮಾರಿಯಾನೆ ಕಾಪ್​ ಮತ್ತು ಜೆಸ್​ ಜೊನಾಸೆನ್​ ಗೆಲುವಿನ ಶಾಸ್ತ್ರ ಮುಗಿಸಿದರು. ಕಾಪ್​ 32 ಎಸೆತಗಳಲ್ಲಿ ಅಷ್ಟೇ ರನ್​ ಗಳಿಸಿದರು. ಇದರಲ್ಲಿ 3 ಬೌಂಡರಿ, 1 ಸಿಕ್ಸರ್​ ಇತ್ತು. ಕೊನೆಯಲ್ಲಿ ಬಿರುಸಿನ ಬ್ಯಾಟ್​ ಮಾಡಿದ ಜೆಸ್​ ಜೊನಾಸೆನ್​ ಆರ್​ಸಿಬಿ ಬೌಲರ್​ಗಳ ಕಾಡಿದರು. 15 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್​​ ಸಮೇತ 29 ರನ್​ ಪೇರಿಸಿದರು. 2 ಎಸೆತ ಬಾಕಿ ಉಳಿಯುವಂತೆಯೇ ತಂಡಕ್ಕೆ ಗೆಲುವು ತಂದುಕೊಟ್ಟರು.

ಆರ್​ಸಿಬಿಗೆ ಎಲ್ಲಿಸಿ ಪೆರ್ರಿ ನೆರವು:ಟಾಸ್​ ಸೋತರೂ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಸತತ ಸೋಲುಗಳಿಂದ ಟೀಕೆಗೆ ಗುರಿಯಾಗಿರುವ ನಾಯಕಿ, ಸ್ಟಾರ್​ ಬ್ಯಾಟರ್ ಸ್ಮೃತಿ ಮಂಧಾನ ಮತ್ತೆ ವೈಫಲ್ಯ ಕಂಡರು. 8 ರನ್​ ಗಳಿಸಿದ್ದಾಗ ಶಿಖಾ ಪಾಂಡೆ ಬೌಲಿಂಗ್​ಗೆ ವಿಕೆಟ್​ ನೀಡಿದರು. ಸೋಫಿ ಡಿವೈನ್​ 21 ರನ್​ ಮಾಡಿ ಔಟಾದರು. ಹೀಥರ್​ ನೈಟ್ 11 ರನ್​ಗೆ ವಿಕೆಟ್​ ನೀಡಿದರು. ಇದರಿಂದ ತಂಡ 12 ಓವರ್​ಗಳಲ್ಲಿ 63 ರನ್​ ಮಾತ್ರ ಗಳಿಸಿತ್ತು. ತಂಡ ನೂರು ರನ್ ಗಡಿ ದಾಟುವುದೂ ಕಷ್ಟ ಎಂಬಂತಾಗಿತ್ತು.

ಈ ಸಂದರ್ಭದಲ್ಲಿ ಕ್ರೀಸ್​ಗಿಳಿದ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ತಂಡದ ಮೊತ್ತ ಹೆಚ್ಚಿಸಿದರು. 73 ರನ್​ಗಳ ಬಿರುಸಿನ ಜೊತೆಯಾಟವಾಡಿದ ಜೋಡಿ ತಂಡ 150 ರನ್​ಗಳ ಸ್ಪರ್ಧಾತ್ಮಕ ಮೊತ್ತ ಗಳಿಸುವಂತೆ ಮಾಡಿದರು. ಅಂತಿಮ 6 ಓವರ್‌ಗಳಲ್ಲಿ ಆರ್‌ಸಿಬಿ 82 ರನ್‌ ಗಳಿಸಿತು. ಪೆರ್ರಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 67 ರನ್ ಮಾಡಿದರೆ, ರಿಚಾ ಘೋಷ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್​ ಬೀಸಿದರು. ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಕೇವಲ 16 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್‌ಗಳ ನೆರವಿನಿಂದ 37 ರನ್ ಗಳಿಸಿದ್ದಾಗ ಶಿಖಾ ಪಾಂಡೆಗೆ ವಿಕೆಟ್​ ನೀಡಿದರು. ಡೆಲ್ಲಿ ಪರವಾಗಿ ಶಿಖಾ ಪಾಂಡೆ 3 ವಿಕೆಟ್​​ ಪಡೆದರೆ, ತಾರಾ ನೊರ್ರಿಸ್​ 1 ವಿಕೆಟ್​ ಕಿತ್ತರು.

ಆರ್‌ಸಿಬಿ ಹೊರಕ್ಕೆ?: ಡೆಲ್ಲಿ ಕ್ಯಾಪಿಟಲ್ಸ್​ ಪಾಯಿಂಟ್​ ಪಟ್ಟಿಯಲ್ಲಿ 5 ಪಂದ್ಯಗಳ ಪೈಕಿ 4 ರಲ್ಲಿ ಗೆದ್ದು 8 ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದೆ. ಸತತ ಐದು ಪಂದ್ಯಗಳಲ್ಲಿ ಸೋಲುವ ಮೂಲಕ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡ ಕೊನೆಯ ಸ್ಥಾನದಲ್ಲಿದ್ದು, ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ವಿರಾಟ್​ ಫಾರ್ಮ್​ ಕಳೆದುಕೊಂಡಿರಲಿಲ್ಲ, ಅದು ಶತಕದ ಲಯ ನಿರ್ಧರಿಸುವ ಮಾನದಂಡವೂ ಅಲ್ಲ: ಸುನಿಲ್​ ಗವಾಸ್ಕರ್​

ABOUT THE AUTHOR

...view details