ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗೊಂದಲಕ್ಕೊಳಗಾಗಿದ್ದಾರೆಯೇ ಹೊರತು ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಲೈವ್ನಲ್ಲಿ ಮಾತನಾಡಿದ ಅವರು, "ರೋಹಿತ್ ಶರ್ಮಾ ಬೌಲರ್‌ಗಳೊಂದಿಗೆ ಹೋರಾಡುತ್ತಿಲ್ಲ. ಬದಲಿಗೆ ಮಾನಸಿಕವಾಗಿ ತಮ್ಮೊಂದಿಗೇ ಹೋರಾಡುತ್ತಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಗೊಂದಲಕ್ಕೆ ಸಿಲುಕಿದ್ದಾರೆ ಅಷ್ಟೇ ಎಂದು ಸೆಹ್ವಾಗ್ ತಿಳಿಸಿದರು.
ಐಪಿಎಲ್‌ನಲ್ಲಿ ಹೆಚ್ಚು ಡಕ್ಔಟ್ ಆದ ಬ್ಯಾಟರ್: ಈ ಐಪಿಎಲ್ ಋತುವಿನಲ್ಲಿ ರನ್ಗಳಿಸಲು ಹೆಣಗಾಡುತ್ತಿರುವ ರೋಹಿತ್ ಶರ್ಮಾ ಇದುವರೆಗೂ ಆಡಿರುವ ಒಟ್ಟು ಪಂದ್ಯಗಳಲ್ಲಿ 18.39ರ ಸರಾಸರಿಯಲ್ಲಿ ಕೇವಲ 184 ರನ್ಗಳನ್ನು ಮಾತ್ರ ಕಲೆಹಾಕಿ 126.89ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೊನೆಯ ಎರಡು ಪಂದ್ಯಗಳಲ್ಲಿ, ಖಾತೆ ತೆರೆಯದೇ ನಿರ್ಗಮಿಸಿದ್ದ ರೋಹಿತ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸುವ ಮೂಲಕ 16ನೇ ಬಾರಿಗೆ ಖಾತೆ ತೆರೆಯದೆ ಡಕ್ ಔಟಾದ ಬ್ಯಾಟರ್ ಆಗಿದ್ದು, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಡಕೌಟ್ ಇದಾಗಿದೆ.
ರೋಹಿತ್ ಕಳಪೆ ಫಾರ್ಮ್ ಮುಂಬೈ ಇಂಡಿಯನ್ಸ್‌ಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ತಂಡಕ್ಕೂ ಆತಂಕದ ವಿಷಯವಾಗಿದೆ. ಐಪಿಎಲ್ ಮುಗಿದ ಕೂಡಲೇ ಭಾರತವು ರೋಹಿತ್ ಸಾರಥ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಜೂನ್ 7 ರಿಂದ ಓವಲ್ ಮೈದಾನದಲ್ಲಿ ಆಡಲಿದೆ.
ರುತುರಾಜ್ ರೀತಿ ಪ್ರದರ್ಶನ ತೋರಬೇಕು: ಇದೇ ವೇಳೆ ಮಾತನಾಡಿದ ಆ್ಯರೋನ್ ಫಿಂಚ್, ಮುಂಬೈನ ಆರಂಭಿಕ ಆಟಗಾರರು ಗೊಂದಲಕ್ಕೊಳಗಾಗದೇ ಸಿಎಸ್ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ರೀತಿಯಲ್ಲಿ ಪ್ರದರ್ಶನ ತೋರಬೇಕು. ಮುಂಬೈನ ಆರಂಭಿಕ ಬ್ಯಾಟರ್ಗಳು ಪ್ರತಿಯೊಂದು ಎಸೆತವನ್ನು ಬೌಂಡರಿಗಟ್ಟಲು ನೋಡುತ್ತಾರೆ. ಹಾಗೆ ಮಾಡುವ ಬದಲು ರುತುರಾಜ್ ಗಾಯಕ್ವಾಡ್ ಅವರ ರೀತಿ ಲೂಸ್ ಬಾಲ್‌ಗಳನ್ನು ಮಾತ್ರ ಬೌಂಡರಿಗಟ್ಟವುದು ಸೂಕ್ತ ಎಂದು ಹೇಳಿದರು.