ಹೈದರಾಬಾದ್: ಟೀಂ ಇಂಡಿಯಾ ಉಪನಾಯಕ ಮತ್ತು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್(MI) ತಂಡದ ನಾಯಕ ರೋಹಿತ್ ಶರ್ಮಾ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದ್ದಾರೆ.
ಹಿಟ್‌ಮ್ಯಾನ್ ಖ್ಯಾತಿಯ ಬ್ಯಾಟರ್ ತಮ್ಮ ಹೊಸ ಐಷಾರಾಮಿ ಮನೆಯ ಹಲವು ಸುಂದರ ಫೋಟೋಗಳು ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ. ಈ ಮನೆಯ ಮೌಲ್ಯ ಕೇಳಿದರೆ ಅರೆಕ್ಷಣ ಯಾರೇ ಆದ್ರೂ ಶಾಕ್ ಆಗ್ಬೇಕು. ಭಾರತದ ಅತ್ಯಂತ ದುಬಾರಿ ವಸತಿ ಕಟ್ಟಡಗಳಲ್ಲಿ ಒಂದಾದ ಮುಂಬೈನ 53 ಅಂತಸ್ತಿನ ಅಹುಜಾ ಟವರ್ಸ್‌ನ 29ನೇ ಅಂತಸ್ತಿನಲ್ಲಿ ಶರ್ಮಾ ಮನೆ ಖರೀದಿಸಿದ್ದಾರೆ. ಈ ಮನೆಯ ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿ.
ಸುಮಾರು 6,200 ಚದರಡಿ ವಿಸ್ತೀರ್ಣ ಹೊಂದಿರುವ ಈ ಬಂಗಲೆಯಲ್ಲಿ ಏನುಂಟು ಅನ್ನೋದಕ್ಕಿಂತ ಏನಿಲ್ಲಾ ಎಂದೇ ಕೇಳುವಂತಾಗಿದೆ. ಹೌದು, ಅತ್ಯಾಧುನಿಕ ಜಿಮ್ ಸೌಲಭ್ಯ, ಐಷಾರಾಮಿ ಅತಿಥಿ ಗೃಹ, ವಿಶಾಲವಾದ ಡೈನಿಂಗ್ ಕೋಣೆ, ಅತ್ಯಂತ ಸುಂದರವಾದ ಟೆರೆಸ್, ಗಾರ್ಡನ್.. ಹೀಗೆ ಈ ಮನೆಯನ್ನು ನೋಡೋಕೆ ಕಣ್ಣೆರಡು ಸಾಲೋಲ್ಲ.
ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಐಪಿಎಲ್ ಕಪ್ ತಂದುಕೊಟ್ಟ ರೋಹಿತ್ ಶರ್ಮಾ, 2011ರಲ್ಲಿ 9.2 ಕೋಟಿ ರೂ.ಗೆ ಮುಂಬೈ ಫ್ರಾಂಚೈಸಿ ಪಾಲಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ರೋಹಿತ್ ಮುಂಬೈನ ಖಾಯಂ ಸದಸ್ಯರೂ ಹೌದು. ಮುಖೇಶ್ ಅಂಬಾನಿ ಒಡೆತನದ ಮುಂಬೈ ತಂಡದಿಂದ ವರ್ಷಕ್ಕೆ ಇವರ ಖಾತೆಗೆ ಕೋಟಿ ಕೋಟಿ ಹಣ ಹರಿದು ಬರುತ್ತದೆ. ಇಲ್ಲಿಯವರೆಗೂ ರೋಹಿತ್ ಶರ್ಮಾ ಐಪಿಎಲ್ನಿಂದ ಸಂಪಾದಿಸಿದ ರೊಕ್ಕವೆಷ್ಟು ಗೊತ್ತೇ? ಅದು, ಒಟ್ಟು 146 ಕೋಟಿ ರೂ.!.
ರೋಹಿತ್ ಶರ್ಮಾ ಪ್ರಮುಖವಾಗಿ CEAT ಟೈಯರ್ಸ್, ಆಡಿಡಾಸ್, ಹುಬ್ಲೋಟ್ ವಾಚ್, ರಿಲಿಸ್ಪ್ರೆ, ರಸ್ನಾ, ಟ್ರುಸಾಕ್ಸ್, ಶಾರ್ಪ್ ಎಲೆಕ್ಟ್ರಾನಿಕ್ಸ್, ಡ್ರೀಮ್ 11 ಸೇರಿದಂತೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಸ್ತುಗಳ ಬ್ರಾಂಡ್ ಪ್ರಮೋಶನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರೋಹಿತ್ ಶರ್ಮಾ ಎಂಡೋರ್ಸ್‌ಮೆಂಟ್, ಜಾಹೀರಾತುಗಳಿಂದಲೇ ವಾರ್ಷಿಕವಾಗಿ ಬರೋಬ್ಬರಿ 75 ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ.