ಕರ್ನಾಟಕ

karnataka

ETV Bharat / sports

50ನೇ ಟೆಸ್ಟ್​ನಲ್ಲಿ ಮೊದಲ ಐಸಿಸಿ ಪ್ರಶಸ್ತಿ ಗೆಲ್ತಾರಾ ನಾಯಕ ರೋಹಿತ್​ ಶರ್ಮಾ? - ಐಸಿಸಿ ಟ್ರೋಫಿ ಮೇಲೆ ರೋಹಿತ್​ ಶರ್ಮಾ ಕಣ್ಣು

ಟೆಸ್ಟ್​ ವೃತ್ತಿ ಜೀವನದ 50ನೇ ಪಂದ್ಯ ಆಡುತ್ತಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾ, ಪ್ರಶಸ್ತಿ ಗೆಲ್ಲುವ ಮೂಲಕ ಸ್ಮರಣೀಯವಾಗಿಸುವ ಬಯಕೆಯಲ್ಲಿದ್ದಾರೆ.

ನಾಯಕ ರೋಹಿತ್​ ಶರ್ಮಾ
ನಾಯಕ ರೋಹಿತ್​ ಶರ್ಮಾ

By

Published : Jun 7, 2023, 12:13 PM IST

ಓವಲ್:ಇಂದಿನಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಡುವ ಮೂಲಕ ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ 50 ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಆಸ್ಟ್ರೇಲಿಯಾ ಎದುರು ಗೆಲ್ಲುವ ಮೂಲಕ ಅವರು ತಮ್ಮ 50 ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸುವ ಹುಮ್ಮಸ್ಸಿನಲ್ಲಿದ್ದಾರೆ.

ರೋಹಿತ್ ಶರ್ಮಾ ಇಲ್ಲಿಯವರೆಗೆ ಒಟ್ಟು 49 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 83 ಇನ್ನಿಂಗ್ಸ್‌ಗಳಲ್ಲಿ 45.66 ರ ಬ್ಯಾಟಿಂಗ್ ಸರಾಸರಿಯೊಂದಿಗೆ 3,379 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಮತ್ತು 14 ಅರ್ಧ ಶತಕ, 1 ದ್ವಿಶತಕ ಗಳಿಸಿದ್ದಾರೆ.

ಭಾರತ ತಂಡದ ನಾಯಕ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕನಾಗಿ ಉತ್ತಮ ದಾಖಲೆ ಹೊಂದಿದ್ದಾರೆ. ಒಟ್ಟು 36 ಇನ್ನಿಂಗ್ಸ್‌ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು 52.76 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಈ ವೇಳೆ, 6 ಶತಕಗಳು ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ ಒಂದು ದ್ವಿಶತಕ ಕೂಡ ಬಾರಿಸಿದ್ದಾರೆ.

ಅಭ್ಯಾಸದ ವೇಳೆ ಹೆಬ್ಬೆರಳಿಗೆ ಗಾಯ:ಡಬ್ಲ್ಯೂಟಿಸಿ ಫೈನಲ್​ಗಾಗಿ ನಿನ್ನೆ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಬಳಿಕ ಅಭ್ಯಾಸದಿಂದ ದೂರವೇ ಉಳಿದಿದ್ದರು. ಗಾಯದ ತೀವ್ರತೆ ಕಡಿಮೆ ಇರುವ ಕಾರಣ ಅವರು ಇಂದಿನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

2 ಐಸಿಸಿ ಟ್ರೋಫಿ ಗೆಲ್ಲಲು ಬಯಸುವೆ:ಇದಕ್ಕೂ ಮೊದಲು ಚಾಂಪಿಯನ್​ಶಿಪ್​ ಗೆಲುವಿನ ಬಗ್ಗೆ ಮಾತನಾಡಿದ್ದ ರೋಹಿತ್​ ಶರ್ಮಾ, ನಾಯಕತ್ವ ತ್ಯಜಿಸುವ ಮೊದಲು ಕನಿಷ್ಠ 2 ಐಸಿಸಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದೇನೆ. ಕಳೆದ 10 ವರ್ಷಗಳಲ್ಲಿ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಈ ಬರವನ್ನು ನೀಗಿಸಬೇಕು ಎಂಬುದು ನನ್ನಾಸೆ. ಓವಲ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲುವಿನ ಮೂಲಕ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಬಯಕೆ ಇದೆ ಎಂದು ಹೇಳಿದ್ದಾರೆ.

2022 ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿ ಸೋಲಿನ ಬಳಿಕ ಮಾಜಿ ನಾಯಕ ವಿರಾಟ್​ ಕೊಹ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ರೋಹಿತ್​ ಶರ್ಮಾ ಎಲ್ಲ ಸ್ವರೂಪಗಳ ತಂಡಕ್ಕೆ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಭಾರತ ತಂಡ ಕಳೆದ ಬಾರಿ ಡಬ್ಲ್ಯೂಟಿಸಿ ಫೈನಲ್​ಗೆ ಬಂದಿದ್ದರೂ ಸೋಲು ಅನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ಮತ್ತೊಂದು ಅವಕಾಶ ಬಂದೊದಗಿದ್ದು, ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದೆ.

ತಂಡದ ಮೇಲೆ ಪ್ರಶಸ್ತಿ ಗೆಲ್ಲುವ ಒತ್ತಡವಿಲ್ಲ. ಟ್ರೋಫಿ ಜಯಿಸಬೇಕು ಎಂಬುದು ಎಲ್ಲ ಆಟಗಾರರ ಕನಸಾಗಿರುತ್ತದೆ. ಇದಕ್ಕಾಗಿ ತಂಡ ಪರಿಶ್ರಮ ವಹಿಸಿದೆ. ಈ ಬಾರಿಯ ಅದನ್ನು ನನಸು ಮಾಡಿಕೊಳ್ಳುವ ಇರಾದೆಯಲ್ಲಿದೆ. ತಮ್ಮ ನಾಯಕತ್ವದಲ್ಲಿ ಪ್ರಶಸ್ತಿ ಗೆಲ್ಲಬೇಕು ಎಂಬುದು ಎಲ್ಲ ನಾಯಕರ ಕನಸಾಗಿರುತ್ತದೆ. ಈ ಬಾರಿ ಅದು ಸಾಕಾರವಾಗಲಿದೆ ಎಂದು ರೋಹಿತ್​ ಹೇಳಿದರು.

ಇದನ್ನೂ ಓದಿ:ತಾರಾ ಕುಸ್ತಿಪಟುಗಳ ಪ್ರತಿಭಟನೆ: ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿದ ಕೇಂದ್ರ ಸರ್ಕಾರ

ABOUT THE AUTHOR

...view details