ಅಹಮದಾಬಾದ್(ಗುಜರಾತ್): ಮತ್ತೊಮ್ಮೆ ಭಾರತ ತಂಡದ ವಿಶ್ವಕಪ್ ಗೆಲ್ಲುವ ಮಹದಾಸೆ ಕೈಗೂಡಲಿಲ್ಲ. ಈ ಬಾರಿಯ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ಒದಗಿಸಿತ್ತು. ಟೂರ್ನಿ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದ ತಂಡ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿತ್ತು. ಆದರೆ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದು, ಇದರೊಂದಿಗೆ ಪ್ರಶಸ್ತಿ ಗೆಲ್ಲುವ ಕನಸು ಕಮರಿಹೋಯಿತು.
ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಮೈದಾನದಲ್ಲಿ ತಂಡದ ಇತರೆ ಆಟಗಾರರು ಸಿರಾಜ್ ಅವರನ್ನು ಸಮಾಧಾನಪಡಿಸಿದರು. ರೋಹಿತ್ ಶರ್ಮಾ ಒದ್ದೆಯಾದ ಕಣ್ಣುಗಳೊಂದಿಗೆ ಮೈದಾನದಿಂದ ಹೊರಬಂದರು.
ವಿರಾಟ್ ಕೊಹ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಕಣ್ಣಾಲಿಗಳು ತೇವಗೊಂಡಿರುವುದನ್ನು ಕಾಣಬಹುದು. ಆಸ್ಟ್ರೇಲಿಯಾ ಗೆಲುವಿಗೆ 10 ರನ್‌ಗಳ ಅಗತ್ಯವಿದ್ದಾಗ ಅವರು ಭಾವುಕರಾದರು. ಭಾರತ ತಂಡದ ಸೋಲು ಬಹುತೇಕ ಖಚಿತವಾಗಿತ್ತು. ಅಷ್ಟರಲ್ಲಿ ಕೊಹ್ಲಿಯ ಕಣ್ಣುಗಳಲ್ಲಿ ನೀರು ಜಿನುಗಿತು.
ಇದನ್ನೂ ಓದಿ:'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್ ಸೋಲಿನ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಮೋದಿ ಸಂದೇಶ
ಟಾಸ್ ಸೋತು 240 ರನ್ ಗಳಿಸಿದ ಭಾರತ:ಈ ಪಂದ್ಯದಲ್ಲಿ ಕಾಂಗರೂ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದಾದ ಬಳಿಕ ಬ್ಯಾಟ್ ಮಾಡಲು ಕ್ರೀಸಿಗೆ ಬಂದ ಭಾರತ ತಂಡ ರನ್ ಕಲೆ ಹಾಕುವಲ್ಲಿ ಎಡವಿತು. ಅಂತಿಮವಾಗಿ 240 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆ.ಎಲ್.ರಾಹುಲ್ 107 ಎಸೆತಗಳಲ್ಲಿ 66 ರನ್ ಹಾಗೂ ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆಡಿದರು. ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್ ಪೇರಿಸಿದರು. ಆದರೆ, ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿದರು. ಭಾರತದ ಬೌಲರ್‌ಗಳ ಪೈಕಿ ಜಸ್ಪ್ರೀತ್ ಬುಮ್ರಾ 2 ಮತ್ತು ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.
ಶತಕ ಬಾರಿಸಿದ ಟ್ರಾವಿಸ್ ಹೆಡ್: 241 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದು ವಿಶ್ವಕಪ್ ಜಯಿಸಿತು. ಟ್ರಾವಿಸ್ ಹೆಡ್ 137 ರನ್‌ಗಳ ಮ್ಯಾಚ್ ವಿನ್ನಿಂಗ್ ಶತಕವಾಡಿದರು. ಮಾರ್ನಸ್ ಲಾಬುಶೇನ್ ಅಜೇಯ 58 ರನ್ ಗಳಿಸಿದರು.
ಇದನ್ನೂ ಓದಿ:'ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ ; ನೀವು ದೇಶಕ್ಕೆ ಹಮ್ಮೆ ತಂದಿದ್ದೀರಿ': ಟೀಂ ಇಂಡಿಯಾಗೆ ಧೈರ್ಯ ತುಂಬಿದ ಶಾರುಖ್ ಖಾನ್