ನವದೆಹಲಿ:ರೋಹಿತ್ ಶರ್ಮಾ ಅವರನ್ನು ಭಾರತದ ಏಕದಿನ ತಂಡದ ನೂತನ ನಾಯಕನಾಗಿ ಬಿಸಿಸಿಐ ಘೋಷಿಸಿದ ಕೆಲ ಗಂಟೆಗಳಲ್ಲೇ ಅವರು 10 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ವೈರಲ್ ಆಗಿದೆ. ವಿರಾಟ್ ಕೊಹ್ಲಿಯವರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಏಕದಿನ ಮುಂದಾಳತ್ವ ನೀಡಲಾಗಿದೆ.
2007ರ ಟಿ-20 ವಿಶ್ವಕಪ್ ಚಾಂಪಿಯನ್ ತಂಡದಲ್ಲಿ ಮಿಂಚಿದ್ದ ರೋಹಿತ್, ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 2011ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ಈ ಬಗ್ಗೆ ಬೇಸರಗೊಂಡಿದ್ದ ರೋಹಿತ್, ಟ್ವೀಟ್ ಮೂಲಕ ನೋವು ತೋಡಿಕೊಂಡಿದ್ದರು.
'ವಿಶ್ವಕಪ್ ತಂಡದ ಭಾಗವಾಗದಿದ್ದಕ್ಕಾಗಿ ನಿಜವಾಗಿಯೂ ನಿರಾಶೆಯಾಗಿದೆ. ನಾನು ಇನ್ನೂ ಮುಂದಕ್ಕೆ ಪಯಣಿಸಬೇಕಿದೆ. ಆದರೆ ಪ್ರಾಮಾಣಿಕವಾಗಿ ಇದೊಂದು ದೊಡ್ಡ ಹಿನ್ನಡೆ' ಎಂದು 2011ರ ಜನವರಿ 31ರಂದು ರೋಹಿತ್ ಟ್ವೀಟ್ ಮಾಡಿದ್ದರು. ಈ ಪೋಸ್ಟ್ ಇದೀಗ ಅವರಿಗೆ ನಾಯಕತ್ವ ಲಭಿಸುತ್ತಿದ್ದಂತೆ ಭಾರಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ 2015 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಿಟ್ಮ್ಯಾನ್ ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ 137 ರನ್ ಸೇರಿದಂತೆ 8 ಪಂದ್ಯಗಳಿಂದ 330 ರನ್ ಬಾರಿಸಿದ್ದರು. ಬಳಿಕ 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು 5 ಶತಕಗಳೊಂದಿಗೆ 648 ರನ್ ಪೇರಿಸಿದ್ದರು. ಇದೀಗ ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ನಲ್ಲಿ ತವರಿನ ಪ್ರೇಕ್ಷಕರೆದುರು ತಂಡವನ್ನು ಮುನ್ನಡೆಸುವ ಅದೃಷ್ಟ ರೋಹಿತ್ಗೆ ಒಲಿದಿದೆ.
ಇದನ್ನೂ ಓದಿ:ಬೋರ್ಡ್ ನೀಡಿದ್ದ 48 ಗಂಟೆ ಸಮಯದಲ್ಲಿ ನಾಯಕತ್ವ ತ್ಯಜಿಸದ ಕೊಹ್ಲಿ, ಬಲವಂತದಿಂದ ಕೆಳಗಿಳಿಸಿದ ಬಿಸಿಸಿಐ