ನವದೆಹಲಿ:ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಅಂತಿಮ ಹಾಗು ಮೂರನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಜಯಭೇರಿ ಬಾರಿಸಿತು. ಈ ಪಂದ್ಯದಲ್ಲಿ ತಂಡದ ನಾಯಕ 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸರಣಿಯ ಹಿಂದಿನ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಕೆಲವರಂತೂ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದರು. ಇದಕ್ಕೆ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ ಶರ್ಮಾ ಮೂರನೇ ಪಂದ್ಯದಲ್ಲಿ 175.36 ಸ್ಟ್ರೈಕ್ ರೇಟ್ನಲ್ಲಿ 69 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ ಅಜೇಯ 121 ರನ್ ಸಿಡಿಸಿದರು.
ರೋಹಿತ್ ಶರ್ಮಾ ದಾಖಲೆ:151ನೇ ಟಿ20 ಪಂದ್ಯಗಳಲ್ಲಿ 143 ಇನ್ನಿಂಗ್ಸ್ ಆಡಿರುವ ಶರ್ಮಾ 5 ಶತಕ ದಾಖಲಿಸಿದ್ದಾರೆ. ಇವರ ಗರಿಷ್ಠ ಸ್ಕೋರ್ 121* ಆಗಿದೆ. ಶರ್ಮಾ ಹೊರತುಪಡಿಸಿ, ನಂತರದ ಸ್ಥಾನದಲ್ಲಿ ಭಾರತದ ಆಟಗಾರ ಸೂರ್ಯಕುಮಾರ್ ಯಾದವ್ ಇದ್ದಾರೆ. 57 ಇನ್ನಿಂಗ್ಸ್ ಆಡಿರುವ ಇವರು 4 ಶತಕ ಸಿಡಿಸಿದ್ದಾರೆ. ಈ ಅವಧಿಯಲ್ಲಿ ಸೂರ್ಯರ ಗರಿಷ್ಠ ಸ್ಕೋರ್ 117 ರನ್ ಆಗಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 92 ಇನ್ನಿಂಗ್ಸ್ ಮೂಲಕ 4 ಶತಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ 3 ಶತಕ ಬಾರಿಸಿದ್ದಾರೆ.
ಭಾರತ-ಅಫ್ಘಾನಿಸ್ತಾನ ರೋಚಕ ಪಂದ್ಯ:ಮೂರನೇ ಟಿ20ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 6 ವಿಕೆಟ್‌ಗೆ 212 ರನ್ ಗಳಿಸಿ, ಮ್ಯಾಚ್ ಟೈ ಮಾಡಿತು. ನಂತರ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ನಲ್ಲೂ ಭಾರತಕ್ಕೆ ಪೈಪೋಟಿ ನೀಡಿದ ಅಫ್ಘಾನಿಸ್ತಾನ 16 ರನ್ ಬಾರಿಸಿತು. ಈ ಗುರಿ ಚೇಸ್ ಮಾಡುವ ವೇಳೆ ರೋಹಿತ್ ಶರ್ಮಾ ಎರಡು ಸಿಕ್ಸರ್ ಹೊಡೆದು ತಂಡ ಗೆಲುವಿನ ಸಮೀಪ ಬಂದಿತ್ತು. ಆದರೆ 6ನೇ ಎಸೆತದಲ್ಲಿ 2 ರನ್ ಬೇಕಿದ್ದಾಗ ಯುವ ಬ್ಯಾಟರ್ ಜೈಸ್ವಾಲ್ ಒಂದು ರನ್ ಗಳಿಸಿದ್ದರಿಂದ ಪಂದ್ಯ ಮತ್ತೆ ಟೈ ಆಯಿತು. ಹೀಗಾಗಿ ಎರಡನೇ ಸೂಪರ್ ಓವರ್ ಪಂದ್ಯ ಆಡಬೇಕಾಯಿತು. ಈ ಬಾರಿ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 11 ರನ್ ಗಳಿಸಿತು. ಅಂತಿಮವಾಗಿ, ಅಫ್ಘಾನ್ 2 ವಿಕೆಟ್ ಕಳೆದುಕೊಂಡಿತ್ತು. ಇತ್ತ ಪಂದ್ಯ ಗೆದ್ದ ಟೀಂ ಇಂಡಿಯಾ 3-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರತ-ಅಫ್ಘಾನಿಸ್ತಾನ 'ಸೂಪರ್' ಟಿ20: ಸರಣಿ ಸ್ವೀಪ್ ಮಾಡಿದ ರೋಹಿತ್ ಟೀಂ