ಅಹ್ಮದಾಬಾದ್:ಕೆಎಲ್ ರಾಹುಲ್ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ, ಶಿಖರ್ ಧವನ್ಗೆ ಕೊರೊನಾ ಬಂದಿರುವುದರಿಂದ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ತಮ್ಮ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ಶನಿವಾರ ಬಹಿರಂಗಗೊಳಿಸಿದ್ದಾರೆ.
ಫೆಬ್ರವರಿ 6 ರಿಂದ ವಿಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಭಾರತ ತಂಡದ ಅಹ್ಮದಾಬಾದ್ಗೆ ಆಗಮಿಸಿದ ನಂತರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 4 ಆಟಗಾರರು ಸೇರಿದಂತೆ ಒಟ್ಟು 7 ಮಂದಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿತ್ತು. ಶಿಖರ್ ಧವನ್, ಶ್ರೇಯಸ್ ಅಯ್ಯರ್, ನದದೀಪ್ ಸೈನಿ ಮತ್ತು ರುತುರಾಜ್ ಗಾಯಕ್ವಾಡ್ ಹಾಗೂ 3 ಮಂದಿ ಬೆಂಬಲ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿತ್ತು. ಆರಂಭಿಕ ಧವನ್ ಕ್ವಾರಂಟೈನ್ನಲ್ಲಿದ್ದರೆ, ಉಪನಾಯಕ ರಾಹುಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗಾಗಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ರೋಹಿತ್ ಮಾಹಿತಿ ನೀಡಿದ್ದಾರೆ.
"ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಆರಂಭಿಕ ಸ್ಥಾನಕ್ಕೆ ಇಶಾನ್ ಕಿಶನ್ ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಅವರು ನನ್ನ ಜೊತೆ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸುತ್ತಾರೆ" ಎಂದು ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಾಯಕ ರೋಹಿತ್ ತಿಳಿಸಿದ್ದಾರೆ.