ಮೆಲ್ಬೋರ್ನ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶುಕ್ರವಾರದ ನೆಟ್ ಸೆಷನ್‌ನಲ್ಲಿ ಎಡಗೈ ಮತ್ತು ಬಲಗೈ ಬೌಲರ್ಗಳಿಂದ ಥ್ರೋಡೌನ್‌ಗಳನ್ನು ತೆಗೆದುಕೊಂಡಿದ್ದು, ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಶಾಹೀನ್ ಅಫ್ರಿದಿಯನ್ನು ಎದುರಿಸಲು ತಯಾರಿ ನಡೆಸಿದ್ದಾರೆ.
ಮೊಣಕಾಲಿನ ಗಾಯದಿಂದ ಹೊರಗುಳಿದಿದ್ದ ಅಫ್ರಿದಿ ವಾಪಸಾಗುವುದರೊಂದಿಗೆ ಪಾಕಿಸ್ತಾನ ತಂಡವು ಬೌಲಿಂಗ್ನಲ್ಲಿ ಬಲಿಷ್ಠ ಪಡೆದುಕೊಂಡಿದೆ. ಕಳೆದ ವರ್ಷದ T20 ವಿಶ್ವಕಪ್‌ನಲ್ಲಿ ಎಡಗೈ ವೇಗಿ ಅಫ್ರಿದಿ ಅವರು ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿ ಭಾರತದ ವಿರುದ್ಧ ಗೆಲುವು ಸಾಧಿಸಲು ಶ್ರಮಪಟ್ಟಿದ್ದರು. ನೆಟ್ ಸೆಷನ್‌ನಲ್ಲಿ ರೋಹಿತ್ ಶರ್ಮಾ ಅವರು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.
ಯುವ ಆಟಗಾರ ಪಂತ್ ನೆಟ್ ಸೆಷನ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ನೆಟ್ಸ್‌ನಲ್ಲಿ ಕಾರ್ತಿಕ್ ದೀರ್ಘ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸದಲ್ಲಿ ತಲ್ಲಿನರಾಗಿದ್ದರು. ನೆಟ್ ಸೆಷನ್‌ನಿಂದ ಹೊರಗುಳಿದಿದ್ದರಿಂದ ರಿಷಬ್ ಪಂತ್ ಪಾಕಿಸ್ತಾನದ ವಿರುದ್ಧ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.
ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಬಂದ ಮೊಹಮ್ಮದ್ ಶಮಿ ಕೂಡ ನೆಟ್‌ನಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಭಾವಶಾಲಿ ಬೌಲಿಂಗ್ ಮಾಡಿದರು. ಅಭ್ಯಾಸ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ವಿರುದ್ಧ 11 ರನ್‌ಗಳನ್ನು ರಕ್ಷಿಸಿದ ನಂತರ ಶಮಿ ಫಾರ್ಮ್‌ನಲ್ಲಿರುವ ಲಕ್ಷಣಗಳನ್ನು ತೋರಿಸಿದರು. ಕೊನೆಯ ಓವರ್‌ನಲ್ಲಿ ಶಮಿ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.